

ಬೆಂಗಳೂರು: ಚಿನ್ನದಂಗಡಿ ವ್ಯಾಪಾರಿಗೆ 3 ಕೆಜಿ ನಕಲಿ ಚಿನ್ನದ ಬಿಸ್ಕತ್ ಕೊಟ್ಟು 1.30 ಕೋಟಿ ರೂ. ಪಡೆದು ವಂಚನೆ ಮಾಡಿದ್ದು, ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ತಿಂಗಳ ಬಳಿಕ ವ್ಯಾಪಾರಿಗೆ ತಾವು ಮೋಸ ಹೋಗಿರುವುದು ತಿಳಿದಿದೆ!
ನಗರತ್‌ಪೇಟೆ ಕೆಂಪಣ್ಣ ಲೇನ್‌ನಲ್ಲಿನ ಕೆ.ಸಿ.ಆರ್.ಜುವಲರ್ಸ್ ಆ್ಯಂಡ್ ಬುಲಿಯನ್ ಮಳಿಗೆ ಮಾಲೀಕ ಕೆ. ರಾಹುಲ್ ಕುಮಾರ್ ದೂರು ಕೊಟ್ಟಿದ್ದಾರೆ. ಇದರ ಅನ್ವಯ ಆರೋಪಿ ಇಲಿಯಾಸ್ ಖಾನ್ ಎಸ್. ಅಜ್ಮೀರಿ ವಿರುದ್ಧ ಎ್ಐಆರ್ ದಾಖಲಿಸಿ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಿನ್ನದ ವ್ಯಾಪಾರಿ ರಾಹುಲ್‌ಕುಮಾರ್, 8 ತಿಂಗಳಿಂದ ಆರೋಪಿ ಇಲಿಯಾಸ್ ಬಳಿ ಚಿನ್ನದ ಬಿಸ್ಕತ್ ಖರೀದಿಸುತ್ತಿದ್ದರು. ಜುಲೈ 20ರಂದು ಇಲಿಯಾಸ್, ಚಿನ್ನದ ವ್ಯಾಪಾರಿಗೆ ಕರೆ ಮಾಡಿ ನಗರತ್‌ಪೇಟೆಗೆ ಬಂದಿರುವುದಾಗಿ ಹೇಳಿದ್ದಾರೆ. ಸಂಜೆ ಓಟಿಸಿ ರಸ್ತೆಯ ಅಂಗಡಿಯಲ್ಲಿ ಆರೋಪಿಯನ್ನು ರಾಹುಲ್ ಭೇಟಿ ಮಾಡಿದಾಗ 3 ಕೆಜಿ ಚಿನ್ನದ ಬಿಸ್ಕೆತ್ ತಂದಿದ್ದೇನೆ. 1.30 ಕೋಟಿ ರೂ. ಪಾವತಿಸಿದರೆ ಕೊಟ್ಟು ಹೋಗುವುದಾಗಿ ಇಲಿಯಾಸ್ ಹೇಳಿದ್ದಾನೆ.
ಅಷ್ಟೊಂದು ಹಣ ಇಲ್ಲ. ಸ್ವಲ್ಪ ಸಮಯ ಬೇಕೆಂದು ಹೇಳಿ ಜುಲೈ 26ರ ಮಧ್ಯಾಹ್ನ 2 ಗಂಟೆಗೆ ಇಲಿಯಾಸ್‌ನ ಭೇಟಿ ಮಾಡಿ 1.30 ಕೋಟಿ ರೂ. ಕೊಟ್ಟು ಆರೋಪಿಯಿಂದ 3 ಕೆಜಿ ಚಿನ್ನ ಪಡೆದು ವ್ಯಾಪಾರಿ ಅಂಗಡಿಗೆಬಂದು ಲಾಕರ್‌ನಲ್ಲಿ ಇಟ್ಟಿದ್ದರು. ಅಲ್ಲದೆ, ಚಿನ್ನದ ಬಿಸ್ಕೆತ್ ಮಾರಾಟಕ್ಕೂ ಇಟ್ಟಿದ್ದರು. ಇದನ್ನು ತಿಳಿದ ಚಿನ್ನದ ವ್ಯಾಪಾರಿ ಪಾರಸ್ಮಲ್ ಜೈನ್ ಎಂಬಾತ ಸೆ.16ರ ಬೆಳಗ್ಗೆ ರಾಹುಲ್ ಅಂಗಡಿಗೆ ಬಂದು ಚಿನ್ನ ಖರೀದಿ ಮಾಡುವುದಾಗಿ ಹೇಳಿದ್ದಾರೆ. ಮಾರಾಟಕ್ಕೆ ಒಪ್ಪಿದ ರಾಹುಲ್ ಬಳಿ ಚಿನ್ನದ ಬಿಸ್ಕೆತ್ ಪಡೆದು ಪರೀಕ್ಷೆಗೆ ತೆರಳುತ್ತಿದ್ದರು. ರಾಹುಲ್ ಜತೆಗೆ ತನ್ನ ನೌಕರರನ್ನು ಕಳುಹಿಸಿದ್ದರು.
ಆದರೆ, ಪರೀಕ್ಷೆ ನಡೆಸಿದಾಗ ಅದು ನಕಲಿ ಚಿನ್ನವೆಂದು ಗೊತ್ತಾಗಿದೆ. ವಿಷಯ ತಿಳಿದ ರಾಹುಲ್, ಆತಂಕಗೊಂಡು ಮತ್ತೊಬ್ಬರ ಬಳಿ ಹೋಗಿ 2ನೇ ಸುತ್ತು ಪರೀಕ್ಷೆಗೆ ಒಳಪಡಿಸಿದಾಗಲೂ ನಕಲಿ ಎಂಬುದು ಖಚಿತವಾಗಿದೆ. ಇತ್ತ ಇಲಿಯಾಸ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ತಿಳಿದು ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.