ಪಂಚಪಕ್ಷಿ ಮಾರುತೇಶ್ವರ ರಥೋತ್ಸವ

panchapakshi
ತಾವರಗೇರಾ ಸಮೀಪದ ಎಸ್. ಗಂಗನಾಳ ಗ್ರಾಮದ ಶ್ರೀಪಂಚಪಕ್ಷಿ ಮಾರುತೇಶ್ವರ ದೇವಸ್ಥಾನದ ಹೊರ ನೋಟ.
Published on

ತಾವರಗೇರಾ: ಅಮೃತ ಗಳಿಗೆಯಲ್ಲಿ ನಿರ್ಮಿಸಿದ ಭಾರತ ಎರಡು ದೇವಸ್ಥಾನಗಳಲ್ಲಿ ತಾವರಗೇರಾ ಸಮೀಪದ ಎಸ್. ಗಂಗನಾಳ ಗ್ರಾಮದ ಶ್ರೀಪಂಚಪಕ್ಷಿ ಮಾರುತೇಶ್ವರ ದೇವಾಲಯವೂ ಒಂದು. ಇದನ್ನು ನಿರ್ಮಿಸಲು ಬರೋಬ್ಬರಿ 13 ವರ್ಷ ಸಮಯ ತೆಗೆದುಕೊಂಡಿದೆ.

ಪಂಚಪಕ್ಷಿ ಶಾಸ್ತ್ರದ ಪ್ರಕಾರ ಅಂದರೆ ಅಮೃತ ಘಳಿಗೆಯಲ್ಲಿ ನಿರ್ಮಾಣವಾಗಿರುವ ಭಾರತದ ಎರಡು ದೇವಲಾಯಗಳಲ್ಲಿ ಎಸ್. ಗಂಗನಾಳದ ಶ್ರೀಪಂಚಪಕ್ಷಿ ಮಾರುತೇಶ್ವರ ದೇವಸ್ಥಾನ ಒಂದಾದರೆ ಇನ್ನೊಂದು ಒರಿಸ್ಸಾ ರಾಜ್ಯದ ಪುರಿಯ ಶ್ರೀ ಜಗನ್ನಾಥ ದೇವಾಲಯವಾಗಿದೆ.

ಗಂಗನಾಳ ದೇಗುಲದಲ್ಲಿರುವ ಮೂರ್ತಿಯು ಉದ್ಭವ ಮೂರ್ತಿಯಾಗಿದ್ದು, ಗುರುಹಿರಿಯರ ಸಂಕಲ್ಪದಂತೆ ಅಮೃತ ಗಳಿಗೆಯಲ್ಲಿಯೇ ದೇವಸ್ಥಾನ ಕಟ್ಟಿರುವುದು ವಿಶೇಷ. ಈ ಕಾರ್ಯದ ಹಿಂದೆ ಹೇರೂರಿನ ರುದ್ರಗೌಡ ಪೊಲೀಸ್ ಪಾಟೀಲ್ ಹಾಗೂ ಶುಕ್ರಸಾಬ್ ಎಂಬ ಗುರುಶಿಷ್ಯರ ಕೊಡುಗೆ ಅಪಾರವಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ದೇಗುಲದ ಎದುರು ಸಮಾಧಿ: ಪಂಚಪಕ್ಷಿ ಶಾಸ್ತ್ರದ ಪ್ರಕಾರ ದೇವಸ್ಥಾನ ನಿರ್ಮಾಣದ ಸಂಕಲ್ಪ ಮಾಡಿದಾಗ ಶರಣ ರುದ್ರಗೌಡಗೆ ಅವರ ಶಿಷ್ಯ ಶುಕ್ರಸಾಬ್ ಸಾಥ್ ನೀಡಿದರಂತೆ. ಹೀಗಾಗಿ ಈ ಗುರು-ಶಿಷ್ಯರ ಸಮಾಧಿಯನ್ನು ದೇವಸ್ಥಾನದ ಮುಂದೆಯೇ ನಿರ್ಮಿಸಿರುವುದು ವಿಶೇಷ. ಇನ್ನು ಶ್ರೀ ಮಾರುತೇಶ್ವರ ದೇಗುಲಕ್ಕೆ ಭೇಟಿ ನೀಡಿ ಶ್ರೀಸ್ವಾಮಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಎಡಭಾಗದದಿಂದ ಪ್ರದಕ್ಷಿಣೆ: ಸಾಮಾನ್ಯವಾಗಿ ಎಲ್ಲ ದೇವಾಲಯಗಳಲ್ಲಿ ಬಲಭಾಗದಿಂದ ಪ್ರದಕ್ಷಿಣೆ ಹಾಕಿದರೆ ಈ ದೇವಸ್ಥಾನದಲ್ಲಿ ಎಡಭಾಗದದಿಂದ ಪ್ರದಕ್ಷಿಣೆ ಹಾಕುವುದು ಮತ್ತೊಂದು ವಿಶೇಷವಾಗಿದೆ. ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಜನರು ಆಗಮಿಸಿ ತಮ್ಮ ಜೀವನದ ಆಗು ಹೋಗುಗಳ ಬಗ್ಗೆ ಶಾಸ್ತ್ರ ಕೇಳಿ ಶ್ರೀಸ್ವಾಮಿಗೆ ನಡೆದುಕೊಳ್ಳುತ್ತಾರೆ. ಅಂದುಕೊಂಡಿದ್ದು ಆಗುತ್ತದೆ ಎಂಬ ನಂಬಿಕೆ ಭಕ್ತರರಲ್ಲಿದೆ.

ಅದ್ದೂರಿ ಕಾರ್ತಿಕೋತ್ಸವ: ಶ್ರೀ ಪಂಚಪಕ್ಷಿ ಮಾರುತೇಶ್ವರ ಜಾತ್ರಾ ಮಹೋತ್ಸವ ಡಿ.13ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಳಿರು-ತೋರಣ, ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕಾರಕ ಮಾಡಲಾಗಿದೆ. ಕಾರ್ತಿಕ (ಛಟ್ಟಿ) ಅಮಾವಾಸ್ಯೆ ದಿನವಾದ ಮಂಗಳವಾರ ಶ್ರೀಸ್ವಾಮಿಯ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಬುಧವಾರ ಅಂದರೆ ಡಿ.13ರ ಬೆಳಗ್ಗೆ ಮಾರುತೇಶ್ವರ ಮೂರ್ತಿಗೆ ರುದ್ರಾಭಿಷೇಕ, ಎಲೆ ಚಟ್ಟಿ ಕಟ್ಟುವುದು, ಬೆಳ್ಳಿ ಮೂರ್ತಿ (ಕವಚ) ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4.30ಕ್ಕೆ 10ನೇ ವರ್ಷದ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net