

ತುಮಕೂರು: ಇತ್ತೀಚೆಗೆ ದಂಪತಿಯ ನಡುವೆ ತೀರಾ ಚಿಕ್ಕಪುಟ್ಟ ವಿಷಯಗಳೂ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ತಿರುಗುತ್ತಿವೆ. ಎಷ್ಟೋ ಸಂದರ್ಭಗಳಲ್ಲಿ ದಂಪತಿಯ ನಡುವೆ ಸಾಮರಸ್ಯ ಮೂಡಿಸುವ ಯತ್ನಗಳು ನಡೆಯುವುದೇ ಇಲ್ಲವಾದ್ದರಿಂದ ಮೊಂಡು ಹಠಕ್ಕೆ ಬಿದ್ದು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಇಂಥವರ ಮನಸ್ಸನ್ನು ಪರಿವರ್ತಿಸಿ, ಒಡೆದು ಹೋಗುತ್ತಿರುವ ದಾಂಪತ್ಯ ಜೀವನವನ್ನು ಪುನಃ ಒಂದು ಮಾಡಿದೆ ತುಮಕೂರಿನ ಲೋಕ್ ಅದಾಲತ್. ಡಿವೋರ್ಸ್ ಪಡೆಯಲೆಂದು ಬಂದ ಐದು ಜೋಡಿಗಳು ಪುನಃ ಒಂದಾಗಿ ಹೋಗಿವೆ. ತಮ್ಮ ತಮ್ಮ ನಡುವೆ ಇದ್ದ ಚಿಕ್ಕಪುಟ್ಟ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿಕೊಂಡು ಈ ಐದು ಜೋಡಿ ಪುನಃ ಒಂದಾಗಿವೆ.
ವಕೀಲರು ಹಾಗೂ ನ್ಯಾಯಾಧೀಶರ ಸಲಹೆ ಮೇರೆಗೆ ದಂಪತಿ ಒಂದಾಗಿದ್ದು, ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ಈ ಘಟನೆ ನಡೆದಿದೆ. ಇವರಿಗೆ ಕೌನ್ಸೆಲಿಂಗ್ ಮಾಡಿದ ನಂತರ ತಮ್ಮ ತಪ್ಪಿನ ಅರಿವಾಗಿದ್ದು, ದಂಪತಿ ಪುನಃ ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ.
ದಾಂಪತ್ಯ ಒಡೆದು ಹೋದ ಮೇಲೆ ತಮ್ಮ ಮಕ್ಕಳ ಭವಿಷ್ಯ ಇನ್ನೇನು ಎಂದು ಚಿಂತಿಸುತ್ತಿದ್ದ ಕುಟುಂಬಸ್ಥರೂ ಈಗ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)