ನಂದಿನಿ ನಕಲಿ ತುಪ್ಪದ ಹಿಂದಿದ್ಯಾ ‘ಮೈಮುಲ್‌’ ಕೈವಾಡ? ಅಸಲಿ ಲೇಬಲ್‌ ಬಂದದ್ಹೇಗೆ? ಪೊಲೀಸರು ಮೌನ ವಹಿಸಿದ್ದೇಕೆ?

1205463
Published on

ಮೈಸೂರು: ಕೆಎಂಎಫ್‌ನ ಪ್ರಖ್ಯಾತ ಬ್ರ್ಯಾಂಡ್‌ ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕೆಗೆ ಸಂಬಂಧಿಸಿದಂತೆ ಇದೀಗ ಭಾರಿ ಅನುಮಾನಗಳು ಹರಿದಾಡುತ್ತಿವೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಗೋದಾಮ ಮೇಲೆ ಹ್ಯೂಮನ್ ರೈಟ್ಸ್ ತಂಡದ ಉಪಾಧ್ಯಕ್ಷ ಪ್ರದೀಪ್ ನೇತೃತ್ವದಲ್ಲಿ ದಾಳಿ ಮಾಡಿದಾಗ ನಕಲಿ ತುಪ್ಪ ತಯಾರಿಸುತ್ತಿರುವುದು ತಿಳಿದು ಬಂದಿತ್ತು. ನಕಲಿ ನಂದಿನಿ ತುಪ್ಪ ತಯಾರಿಸಿ ಲೋಡ್ ಮಾಡಿ ಮೈಸೂರು ನಗರಾದ್ಯಂತ ವಿತರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಈ ತಂಡ ದಾಳಿ ನಡೆಸಿತ್ತು. ನಂದಿನಿ ತುಪ್ಪದ ರೂಪವೇ ಬರಲೆಂದು ಅದಕ್ಕೆ ಡಾಲ್ಡಾ ಮಿಕ್ಸ್ ಮಾಡಿ ನಕಲಿ ತುಪ್ಪ ತಯಾರಿ ಮಾಡಲಾಗುತ್ತಿತ್ತು. ಈ ನಕಲಿ ತುಪ್ಪವನ್ನು ಪ್ಯಾಕಿಂಗ್ ಮಾಡುತ್ತಿದ್ದ ವೇಳೆಯೇ ತಂಡದಿಂದ ದಾಳಿ ನಡೆಸಲಾಗಿತ್ತು.

ಇದರ ಬೆನ್ನಲ್ಲೇ ಇದೀಗ ಭಾರಿ ಕುತೂಹಲ ಉಂಟಾಗಿದ್ದು, ಈ ಅಕ್ರಮದ ಹಿಂದೆ ಮೈಮುಲ್‌ (ಮೈಸೂರು ಮಿಲ್ಕ್ ಯೂನಿಯನ್ ಲಿಮಿಟೆಡ್) ಕೈವಾಡ ಇರುವ ಶಂಕೆ ಶುರುವಾಗಿದೆ. ಆರೋಪಿಗಳಿಗೆ ಮೈಮುಲ್ ಸಹಕಾರ ಮಾಡುತ್ತಿದೆ ಎಂಬ ಭಾರಿ ಆರೋಪ ಕೇಳಿಬಂದಿದೆ.

ಜಾಲ ಬೆಳಕಿಗೆ ಬಂದ ಬೆನ್ನಲ್ಲೇ ಈ ಬಗ್ಗೆ ಭಾರಿ ಚರ್ಚೆ ಶುರುವಾಗಿದ್ದು, ಎಲ್ಲರ ಕಣ್ಣೀಗ ಮೈಮುಲ್‌ ಹತ್ತ ಹರಿದಿದೆ. ನಕಲಿ ತುಪ್ಪ ತಯಾರಿಸುತ್ತಿರುವ ಗೋಡಾನ್ ನಡೆಸುತ್ತಿದ್ದವನು ತಮಿಳುನಾಡಿನವರೇ ಇರಬಹುದು. ಆದರೆ ಅವರಿಗೆ ಸಾಥ್‌ ಕೊಟ್ಟವರು ಮೈಸೂರಿನವರು ಎಂಬ ಆರೋಪವಿದೆ. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಗೋಡಾನ್‌ನಲ್ಲಿದ್ದ ನಕಲಿ ತುಪ್ಪದ ಟಿನ್‌ಗಳ ಮೇಲೆಗಳ ಅಸಲಿ ಕೆಎಂಎಫ್ ಲೇಬಲ್‌ಗಳೂ ಪತ್ತೆಯಾಗಿವೆ! ಈ ಅಸಲಿ ಲೇಬಲ್‌ ಇಲ್ಲಿಯವರೆಗೆ ಪೂರೈಕೆ ಮಾಡಿದವರು ಯಾರು, ಇದು ಸುಲಭದ ಮಾತಲ್ಲ, ಆದ್ದರಿಂದ ಮೈಸೂರಿನ ಕೈವಾಡ ಇದರಲ್ಲಿ ಇದೆ ಎನ್ನುವುದು ಈಗಿರುವ ಸಂದೇಹ.

ಅಷ್ಟೇ ಅಲ್ಲದೇ, ನಾಲ್ಕು ತಿಂಗಳಿಂದ ಜಾಲ ಕಾರ್ಯನಿರ್ವಹಿಸುತ್ತಿದ್ದರೂ ಮಾರ್ಕೆಟಿಂಗ್ ಟೀಮ್ ಏನು ಮಾಡುತ್ತಿತ್ತು ಎನ್ನುವುದು ಅವರ ಪ್ರಶ್ನೆ. ಎಂಆರ್‌ಪಿ ದರಕ್ಕಿಂತ ಕಡಿಮೆ ರೇಟ್‌ಗೆ ತುಪ್ಪ ಸಿಗುತ್ತಿದ್ದರೂ ಏಕೆ ದೂರು ಕೊಡಲಿಲ್ಲ, ಅಥವಾ ದೂರು ಬಂದರೂ ನಕಲಿ ತುಪ್ಪ ಜಾಲಕ್ಕೆ ಸಹಕರಿಸುವ ಸಲುವಾಗಿ ಸುಮ್ಮನಾಗಿದ್ರಾ? ನಕಲಿ ಜಾಲದ ರೂವಾರಿಗಳನ್ನು ಪತ್ತೆ ಹಚ್ಚಲು ಮೀನಮೇಷ ಎಣಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಸಾಲದು ಎಂಬುದಕ್ಕೆ ಕಣ್ಣ ಮುಂದೆಯೇ ಸುಳಿವುಗಳಿದ್ದರೂ ಇದುವರೆಗೆ ಒಬ್ಬರನ್ನೂ ಪೊಲೀಸರು ಬಂಧಿಸಿಲ್ಲ, ಒಬ್ಬರ ವಿಚಾರಣೆಯೂ ನಡೆದಿಲ್ಲ. ಇವೆಲ್ಲವೂ ಈಗ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net