‘ಕತ್ತಲಲ್ಲಿ ಕರಿ ಬೆಕ್ಕು ಹುಡ್ಕೋ ಮಂದಿ ಅವ್ರು, ಹೇಳೋರು- ಕೇಳೋರು ಇದ್ದಾರೇನ್ರಿ? ಈ ಜನ್ಮದಲ್ಲಿ ಅಧಿಕಾರಕ್ಕೆ ಬರಲ್ಲ’

KS Eshwarappa
Published on

ಬೆಂಗಳೂರು: ಕಾಂಗ್ರೆಸ್‌ನವರು ಕತ್ತಲೆ ರೂಂನಲ್ಲಿ ಕರಿ‌ ಬೆಕ್ಕು ಹುಡುಕುತ್ತಿದ್ದಾರೆ. ಐದು ಮಂದಿ ನಾಯಕರು ಸಿಎಂ ಸ್ಥಾನ ಹುಡುಕುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.

ಈ‌ ಜನ್ಮದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ನಮ್ಮಲ್ಲಿ‌ ಹೇಳುವವರು ಕೇಳುವವರು ಇದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಇರುವುದೇನು? ಜಾತಿಗೊಬ್ಬರು ಸಿಎಂ ಸ್ಥಾನವನ್ನು ಮಾಡಿಕೊಳ್ಳುತ್ತಿದ್ದಾರೆ. ಪರಮೇಶ್ವರ್, ಸಿದ್ದರಾಮಯ್ಯ, ಡಿಕೆಶಿ, ತನ್ವೀರ್ ಎದ್ದು ಕುಳಿತಿದ್ದಾರೆ. ಪಾಪ ಕಾಂಗ್ರೆಸ್ ಕಥೆ ಏನು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಎಲ್ಲಾದರೂ ಶಾಸಕರ ಬಾಯಿ ಮುಚ್ಚಿಸಿದರಾ? ಬಹಳಷ್ಟು ಬಾರಿ ಪರಮೇಶ್ವರ್ ಗೆ ಅವಕಾಶ ತಪ್ಪಿಸಿದರು. ತನ್ವೀರ್ ಸೇಠ್ ಸಿಎಂ ಸ್ಥಾನ ಸಿಗ್ಲಿಲ್ಲ ಎನ್ನುತ್ತಾರೆ. ಯಾರಾದ್ರೂ ಅವರ ಬಾಯಿ ಮುಚ್ಚಿಸಿದ್ರಾ ಎಂದು ಪ್ರಶ್ನಿಸಿದ ಈಶ್ವರಪ್ಪನವರು, ಇವತ್ತು ಕಾಂಗ್ರೆಸ್ ಹುಡುಕುವ ಸ್ಥಿತಿ ಬಂದಿದೆ. ರಾಜಸ್ತಾನ, ಪಂಜಾಬ್ ನಲ್ಲಿ‌ಮಾತ್ರ ಇದೆ. ಇಲ್ಲಿ 70 ಸೀಟು ಇಟ್ಕೊಂಡು ಸಿಎಂ ಕುರ್ಚಿ ಹುಡುಕಾಡುತ್ತಿದ್ದಾರೆ ಎಂದು ಕುಟುಕಿದರು.

ನಮ್ಮ ಚರ್ಚೆ ಅವರಿಗೆ ಬೇಡ, ನಾವು ರಿಪೇರಿ ಮಾಡಿಕೊಳ್ಳುತ್ತೇವೆ. ಸಾಯುತ್ತಿರುವ ಕಾಂಗ್ರೆಸ್ ಉಳಿಸುವವರು ಯಾರು ಎಂದು ಅವರು ಪ್ರಶ್ನಿಸಿದರು.

ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ‌ ನೀಡಿದ್ದರು. ಆಗ ನಮ್ಮ ಶಾಸಕರು, ಸಚಿವರ ಜೊತೆ ಸಭೆ ನಡೆಸಿದ್ದರು. ಯಡಿಯೂರಪ್ಪನವರು ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಕಾರ್ಯಕರ್ತರಲ್ಲೂ ಸ್ವಲ್ಪ ಭಿನ್ನಾಬಿಪ್ರಾಯಗಳಿದ್ವು ಅರುಣ್ ಸಿಂಗ್ ಬಂದು ಎಲ್ಲವನ್ನೂ ಸರಿಮಾಡಿ ಹೋಗಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಏನಾದ್ರೂ ನಿಂತಿದೆಯೆ? ಎಂದು ಕೆಣಕಿದರು. ರಮೇಶ್ ಜಾರಕಿಹೊಳಿ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಮ್ಮಲ್ಲಿ‌ ಹೇಳುವವರು ಕೇಳುವವರು ಇದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಇರುವುದೇನು ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net