‘ಸಿದ್ದರಾಮಯ್ಯನಿಗೆ ಸೋಂಕು ತಗುಲಿದ್ಯೊ? ಮಾನಸಿಕ ಸ್ಥಿಮಿತ ಕಳೆದುಹೋಗಿದ್ಯೊ..?’

DVS
Published on

ಬೆಂಗಳೂರು: ಮೊದಲಿಗೆ ಜೀವ ಉಳಿಸುವುದು ಮುಖ್ಯ, ನಂತರ ಜೀವನ. ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದರಿಂದ ಸೋಂಕು ಪ್ರಕರಣಗಳು ಗಣನೀಯವಾಗಿ ತಗ್ಗಿದ್ದು, ರಾಜ್ಯದಲ್ಲೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಪರೋಕ್ಷವಾಗಿ ಲಾಕ್ ಡೌನ್ ಜಾರಿಗೆ ಒಲವು ತೋರಿಸಿದ್ದಾರೆ.

ಹೆಬ್ಬಾಳದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅಗತ್ಯವಿರುವೆಡೆ ಲಾಕ್ ಡೌನ್ ಜಾರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದ್ದು, ಪ್ರಧಾನಿ ಮೋದಿ ಅವರು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದಾರೆ ಎಂದರು.

ಕರೊನಾ ಸೋಂಕು ನಿಯಂತ್ರಣ, ಚಿಕಿತ್ಸೆ ಸೌಲಭ್ಯ ಕಲ್ಪಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದ್ದು, ಬೇಡಿಕೆಗೆ ಕೇಂದ್ರ ಸರ್ಕಾರ ಸಕಾಲಕ್ಕೆ ಸ್ಪಂದಿಸಿದೆ ಎಂದು ಹೇಳಿದರು.

ಸಿದ್ದರಾಮಯ್ಯಗೆ ಭ್ರಮೆ

ಸಿದ್ದರಾಮಯ್ಯ ಕರೊನಾ ಸೋಂಕು ತಗುಲಿದೆಯೋ ಅಥವಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೋ ಗೊತ್ತಿಲ್ಲ. ಸದಾ ಕಾಲ ಭ್ರಮಾಧೀನರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಟೀಕಿಸುತ್ತಿರುತ್ತಾರೆ ಎಂದು ಡಿವಿಎಸ್ ಅಣಕವಾಡಿದರು.

ಆಮ್ಲಜನಕ ಪೂರೈಕೆ ಪ್ರಮಾಣವನ್ನು ಹೆಚ್ಚಿಸಿದ್ದು, ರಾಜ್ಯಕ್ಕೆ ಇಂದು 945 ಮೆಟ್ರಿಕ್ ಟನ್ ಲಭ್ಯವಾಗಲಿದೆ. ರೆಮ್ ಡಿಸಿವಿರ್ ಚುಚ್ಚುಮದ್ದು ಅಗತ್ಯ ತಕ್ಕಂತೆ ಹಂಚಿಕೆಗೆ ಕ್ರಮವಹಿಸಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕ ರಾಜ್ಯದಲ್ಲೇ ಬಳಕೆ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಜತೆ ಚರ್ಚಿಸಲಾಗಿದೆ ಎಂದು ವಿವರಿಸಿದರು.

ಏನೆಲ್ಲ ಕ್ರಮಗಳಾಗಿವೆ ಎಂದು ಪ್ರತಿಪಕ್ಷ ನಾಯಕರು ಅರಿತು ಮಾತನಾಡಬೇಕು. ಸಂಕಷ್ಟ ಸಂದರ್ಭದಲ್ಲಿ ಪ್ರಚಾರಪ್ರಿಯರಾಗಬೇಕಾಗಿಲ್ಲ. ಜವಾಬ್ದಾರಿ ನಿರ್ವಹಿಸುವ ಕಡೆಗೆ ಒತ್ತು ನೀಡಬೇಕಾಗುತ್ತದೆ. ಸಿಎಂ ಬಿಎಸ್ ವೈ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದ್ದು, ಪ್ರತಿಯೊಬ್ಬ ಸಚಿವರಿಗೂ ಹೊಣೆ ಒಪ್ಪಿಸಿ ಕೆಲಸ ತೆಗೆದುಕೊಳ್ಳುತ್ತಿದ್ದಾರೆ ಎಂದು ಡಿ.ವಿ.ಸದಾನಂದ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net