

ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗದ ಆಮಿಷ ಒಡ್ಡಿ ಅವರನ್ನು ಬಳಸಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒಟ್ಟು ಐವರು ಆರೋಪಿಗಳ ಬಂಧನವಾಗಿದೆ.
ವಿಶಾಲ್ ಕುಮಾರ್, ಭೀಮಾಂಶು ಠಾಕೂರ್, ಸಾಗರ್, ಮಹಾಬಲಿಸಿಂಗ್, ಸುಬರ್ಜಿತ್ ಸಿಂಗ್ ಬಂಧಿತರು. ಇವರು Loconto ಎಂಬ ಆ್ಯಪ್ ಒಂದರ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಆಸೆ ತೋರಿಸಿ ನೇಮಕ ಮಾಡಿಕೊಳ್ಳುತ್ತಿದ್ದರು. ನಂತರ ಇಂಟರ್ನ್ಯಾಷನಲ್ ಕೊರಿಯರ್ ಸರ್ವೀಸ್ ಹೆಸರಿನಲ್ಲಿ ಈ ಉದ್ಯೋಗಿಗಳ ಮೂಲಕ ಅಗತ್ಯ ಇರುವವರಿಗೆ ಡ್ರಗ್ಸ್ ಕಳುಹಿಸುತ್ತಿದ್ದರು.
ವಿವಿಧ ನಗರಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಪೋನ್ ಪೇ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು. ಹಣ ಪಡೆದ ಬಳಿಕ ಯುವಕರ ಮೂಲಕ ಅದನ್ನು ಸಪ್ಲೈ ಮಾಡಿಸುತ್ತಿದ್ದರು.
ಗಿಫ್ಟ್ ಬಾಕ್ಸ್, ಕೊರಿಯರ್, ಎನ್ವಲಪ್ ಮುಖಾಂತರ ಡ್ರಗ್ಸ್ ಸರಬರಾಜು ಆಗುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಎರಡು ಕೋಟಿ ರೂಪಾಯಿ ಮೌಲ್ಯದ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡಲಾಗಿದೆ.