ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಡಬಲ್​ ಮರ್ಡರ್​- ಕೊಲೆಗಾರನೇ ಕೊಲೆಯಾದ!

murder1
Published on

ಮೈಸೂರು: ಕಳ್ಳತನದಲ್ಲಿ ಪಾಲು ಕೇಳಿದಕ್ಕೆ ಒಬ್ಬ ಹಾಗೂ ಕೊಲೆ ಸಂಬಂಧ ಜಗಳವಾಗಿದ್ದಕ್ಕೆ ಇಬ್ಬೊಬ್ಬ ಕೊಲೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರಾಜು(30), ರಾಚಯ್ಯ(30) ಕೊಲೆಯಾದವರು. ಇವರನ್ನು ಕೊಲೆ ಮಾಡಿರುವ ಆರೋಪವನ್ನು ಮುನಿಯ ಎಂಬಾತ ಎದುರಿಸುತ್ತಿದ್ದಾರೆ.

ಈ ಮೂವರೂ ಸೇರಿ ಪಂಪ್‌ಸೆಟ್ ಕಳ್ಳತನ ಮಾಡುತ್ತಿದ್ದರು. ಆಗಸ್ಟ್​ ಕೊನೆಯ ವಾರ ಪಂಪ್​ಸೆಟ್​ ಕಳ್ಳತನಕ್ಕೆ ಸಂಬಂಧಿಸಿದಂತೆ ಅದರಲ್ಲಿ ಪಾಲು ಕೇಳುವ ವಿಷಯವಾಗಿ ಮೂವರ ನಡುವೆ ಜಗಳವಾಗಿದೆ. ಆಗ ಮುನಿಯ ಮತ್ತು ರಾಜು ಸಹೋದರರು ಸೇರಿ ಆಗಸ್ಟ್​ 28ರಂದು ರಾಚಯ್ಯನನ್ನು ಕೊಲೆ ಮಾಡಿದ್ದರು. ಕೊಲೆ‌ ಮಾಡಿ ಹುಣಸೂರು ತಾಲೂಕಿನ ಗೌಡನಕಟ್ಟೆ ಬಳಿ ಶವ ಸುಟ್ಟು ಹಾಕಿದ್ದರು.

ಇದಾದ ಬಳಿಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಊರಿಗೆ ಹೋಗುವುದು ಬೇಡ ಅಂದಿದ್ದ ಮುನಿಯ. ಇದಕ್ಕೆ ಒಪ್ಪದೇ ಒಬ್ಬನೇ ಊರಿಗೆ ಹೋಗಲು ಮುಂದಾಗಿದ್ದ ರಾಜು. ಇದರಿಂದ ಆಕ್ರೋಶಗೊಂಡ ಮುನಿಯ ಸಹೋದರ ರಾಜುವಿನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳಿನಲ್ಲಿ ಈ ಘಟನೆ ನಡೆದಿದೆ.

ನಂತರ ಮುನಿಯ ತಲೆ ಮರೆಸಿಕೊಂಡಿದ್ದ. ಕೊಲೆಯ ಬೆನ್ನತ್ತಿ ಹೋಗಿರುವ ಹುಣಸೂರು ಪೊಲೀಸರಿಗೆ ಮುನಿಯ ಸಿಕ್ಕಿದ್ದು, ಆತನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net