

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಸಿದ್ದರಾಮೋತ್ಸವ ಇದೇ 3ರಂದು ಅದ್ಧೂರಿಯಾಗಿ ನೆರವೇರಿದೆ. ಎಂದಿಗೂ ಕಂಡರಿಯದ ರೀತಿಯಲ್ಲಿ ಲಕ್ಷ ಲಕ್ಷ ಜನರು ಈ ಉತ್ಸವಕ್ಕೆ ಆಗಮಿಸಿ ಸಿದ್ದರಾಮಯ್ಯನವರಿಗೆ ಶುಭ ಕೋರಿದ್ದಾರೆ. ಖುದ್ದು ಕಾಂಗ್ರೆಸ್ಸಿಗರೇ ಬೆರಗಾಗಷ್ಟು ಮಂದಿ ಈ ಉತ್ಸವಕ್ಕೆ ಆಗಮಿಸಿದ್ದರು. ಆದರೆ ಈ ಹುಟ್ಟುಹಬ್ಬ ಶುರುವಾದಾಗಿನಿಂದಲೂ ಸಿದ್ದರಾಮಯ್ಯನವರ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಲೇ ಇದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯನವರಿಗೆ 75 ವರ್ಷ ವಯಸ್ಸಾಗಿದೆ ಎಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ ನಿಜವಾಗಿಯೂ ಸಿದ್ದರಾಮಯ್ಯನವರಿಗೆ ಆಗಿರುವ ವಯಸ್ಸೆಷ್ಟು ಎನ್ನುವ ಬಗ್ಗೆ ಈ ಚರ್ಚೆ. ಇದಕ್ಕೆ ಕಾರಣ, ಅವರದ್ದೇ ದಾಖಲೆಗಳಲ್ಲಿ ಇರುವ ಜನ್ಮದಿನ ಹೇಳುತ್ತಿರುವುದೇ ಬೇರೆ. ಸಿದ್ದರಾಮಯ್ಯನವರ ಅಭಿಮಾನಿಗಳು, ಕಾಂಗ್ರೆಸ್ ನಾಯಕರು, ಕಾರ್ಯಕರ್ತರೆಲ್ಲರು ಎಲ್ಲರೂ ಸಿದ್ದರಾಮಯ್ಯನವರಿಗೆ 75 ವಯಸ್ಸು ಆಗಿದೆ ಎಂದರೆ ಕೆಲವರು 74ನೇ ಹುಟ್ಟುಹಬ್ಬ ಮುಗಿದು 75ಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ.
1947ರಲ್ಲಿ ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ನಾವೀಗ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ದಾಖಲೆಗಳ ಪ್ರಕಾರ ಸಿದ್ದರಾಮಯ್ಯ ಅವರು ಹುಟ್ಟಿರುವುದು 1948ರಲ್ಲಿ ಎಂದು ದಾಖಲೆ ಹೇಳುತ್ತದೆ. ಇದರ ಅನ್ವಯ ಹೋದರೆ ಸಿದ್ದರಾಮಯ್ಯನವರಿಗೆ 74 ವರ್ಷ ವಯಸ್ಸು ಎನ್ನುವುದು ಈಗಿರುವ ಚರ್ಚೆ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಸಿದ್ದರಾಮಯ್ಯನವರೇ 2018ರಲ್ಲಿ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ಪ್ರಕಾರ ಹೋದರೆ ಅವರಿಗೆ ಈಗ 73 ವರ್ಷ ವಯಸ್ಸು!
ಈ ಅಫಿಡವಿಟ್ ಸಲ್ಲಿಸಿರುವುದು 2018ರ ಏಪ್ರಿಲ್ ತಿಂಗಳಿನಲ್ಲಿ. ಸಿದ್ದರಾಮಯ್ಯ ಹುಟ್ಟಿರುವುದು ಆಗಸ್ಟ್ನಲ್ಲಿ, ಆದ್ದರಿಂದ ಏಪ್ರಿಲ್ನಲ್ಲಿ 69 ವರ್ಷ ವಯಸ್ಸಾಗಿತ್ತು, ಆಗಸ್ಟ್ನಲ್ಲಿ 70 ಆಯಿತು ಎನ್ನುತ್ತಿದ್ದಾರೆ ಅಭಿಮಾನಿಗಳು. ಆ ಲೆಕ್ಕಾಚಾರದಲ್ಲಿ ಹೋಗುವುದಾದರೂ ಅವರಿಗೆ ಈಗ 75 ಅಲ್ಲ, 74 ಅಂತಿದ್ದಾರೆ ವಿರೋಧ ಪಕ್ಷಗಳು!
ಇನ್ನು ಇಸ್ವಿಯಲ್ಲಿ ಮಾತ್ರವಲ್ಲದೇ ಅವರ ಹುಟ್ಟಿದ ದಿನಾಂಕದಲ್ಲಿಯೂ ಭಾರಿ ಗೊಂದಲವಿದೆ. ಇದಕ್ಕೆ ಕಾರಣ, ವಿಧಾನಸಭೆ ವೆಬ್‌ಸೈಟ್ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರ ಜನ್ಮ ದಿನಾಂಕ 12.08.1948, ಅವರ ಅಭಿಮಾನಿಗಳೇ ಹೇಳುವ ಪ್ರಕಾರ ಲೆಕ್ಕಾಚಾರ ಹಾಕಿದರೂ ಆಗಸ್ಟ್ 3ರಂದು ಸಿದ್ದರಾಮಯ್ಯ ಅವರು 75ನೇ ವಯಸ್ಸಿಗೂ ಕಾಲಿಟ್ಟಿರಲಿಲ್ಲ ಎನ್ನುತ್ತಿದ್ದಾರೆ ಕಮೆಂಟಿಗರು!
ಹಾಗಿದ್ದರೆ ಚುನಾವಣಾ ಪ್ರಮಾಣಪತ್ರ ಸುಳ್ಳಾ? ವಿಧಾನಸಭೆಯಲ್ಲಿ ಶಾಸಕರ ಪರಿಚಯ ಇರುವ ದಿನಾಂಕ ತಪ್ಪಾ ಅಥವಾ ನಿಜಕ್ಕೂ ಸಿದ್ದರಾಮಯ್ಯನವರಿಗೆ 75 ವರ್ಷ ವಯಸ್ಸಾ ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಆದರೆ ಈ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಹಾಗೂ ಅಭಿಮಾನಿಗಳು ಮಾತ್ರ ಕಿಡಿ ಕಾರುತ್ತಿದ್ದಾರೆ. ಸಿದ್ದರಾಮೋತ್ಸವ ಭರ್ಜರಿಯಾಗಿ ನಡೆದಿರುವುದನ್ನು ಸಹಿಸದೇ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. (ಏಜೆನ್ಸೀಸ್)