

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಜನರ ಸ್ಥಿತಿ ಈಗ ಹೇಳತೀರದಾಗಿದೆ. ಏಕೆಂದರೆ ಇಲ್ಲಿಯ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದ್ದು, ಊರಿನ ಹಲವು ಸ್ಥಳಗಳಿಗೆ ಇಲ್ಲಿಂದಲೇ ನೀರು ಪೂರೈಕೆಯಾಗುತ್ತಿದೆ!
ನಗರದ ನ್ಯಾಯಾಲಯದ ಹಿಂಭಾಗವಿರುವ ಜಲಮಂಡಳಿಯ ನೀರಿನ ಟ್ಯಾಂಕ್ ವಾಲ್ವ್‌ನಲ್ಲಿ ಶವ ಪತ್ತೆಯಾಗಿದ್ದು, ನಗರದದ ಕೋಟೆ ಹಾಗೂ ಕುವೆಂಪು ನಗರ ಭಾಗಕ್ಕೆ ನೀರು ಪೂರೈಸುವ ಟ್ಯಾಂಕ್ ಇದಾಗಿದೆ!
ಟ್ಯಾಂಕ್ ಕೆಳಗಿನ ವಾಲ್ವ್‌ನಲ್ಲಿ ಕೊಳೆತ ಶವ ಪತ್ತೆಯಾಗಿದ್ದು, ಮಹಿಳೆ ನೀರಿನ ಟ್ಯಾಂಕ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಟ್ಯಾಂಕ್ ಮೇಲೆ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿವೆ. ಸತ್ತು ಬಹಳ ದಿನಗಳಾಗಿದ್ದು ದೇಹವು ಸಂಪೂರ್ಣವಾಗಿ ನೀರಿನಲ್ಲಿ ಬೆರೆತು ಹೋಗಿದೆ.
ಮಹಿಳೆ ಸತ್ತು ಹಲವು ದಿನಗಳಾಗಿರುವ ಶಂಕೆ ವ್ಯಕ್ತವಾಗಿದ್ದು, ಇದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಿಲ್ಲ. ವಾಲ್ವ್‌ನಿಂದ ಶವ ತೆಗೆಯಲು ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಟ್ಯಾಂಕಿನ ನೀರನ್ನು ಬಳಸುವ ಜನತೆ ತಕ್ಷಣ ಬಳಕೆ ನಿಲ್ಲಿಸುವಂತೆ ಅಧಿಕಾರಿಗಳ ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಕೂಡಲೇ ಟ್ಯಾಂಕರ್ʼಗಳ ಮೂಲಕ ಜನರಿಗೆ ನೀರು ಪೂರೈಕೆ ಮಾಡುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, “ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅದೇ ರೀತಿ ನಗರಸಭೆ ಅಧಿಕಾರಿಗಳ ಜತೆಗೂ ಮಾತನಾಡಿ, ಜನರ ಕುಡಿಯುವ ಮತ್ತು ದಿನಬಳಕೆ ನೀರಿನ ಪರ್ಯಾಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ” ಎಂದರು.
ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಆ ನಂತರ ಅದರ ಸ್ವಚ್ಛತೆ ಖಾತರಿಪಡಿಸಿಕೊಂಡ ನಂತರ ಅಧಿಕಾರಿಗಳು ಅಧಿಕೃತವಾಗಿ ಹೇಳುವ ತನಕ ಯಾರೂ ಆ ಟ್ಯಾಂಕಿನ ನೀರನ್ನು ಬಳಸಬಾರದು ಎಂದು ಅವರು ಜನರಲ್ಲಿ ಹೆಚ್‌ಡಿಕೆ ಅವರು ಮನವಿ ಮಾಡಿದ್ದಾರೆ.