ವಿಶ್ವದ ಮೊದಲ ಸಂಪೂರ್ಣ ಬೆನ್ನುಮೂಳೆಯ ಗಡ್ಡೆ ತೆರವು ಯಶಸ್ವಿ ಶಸ್ತ್ರಚಿಕಿತ್ಸೆ : ಡಾ.ಡಿ.ವೀರೇಂದ್ರ ಹೆಗ್ಗಡೆ ಹರ್ಷ

4.heggade
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಶ್ವದ ಮೊದಲ ಇಂಟ್ರಾ ಡ್ಯೂರಲ್ ಸ್ಪೈನಲ್ ಟ್ಯೂಮರ್ ತೆಗೆದು ಯಶಸ್ವಿ ಡ್ಯೂರಲ್ ದುರಸ್ತಿ ಶಸ್ತ್ರಚಿಕಿತ್ಸೆ ಮಾಡಿ ಜಾಗತಿಕ ಮೈಲಿಗಲ್ಲನ್ನು ಸೃಷ್ಟಿಸಿದೆ. ವೈದ್ಯಕೀಯ ಲೋಕದಲ್ಲಿ ಇದೊಂದು ವಿಶೇಷ ಸಾಧನೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹರ್ಷ ವ್ಯಕ್ತಪಡಿಸಿದರು. ಭಾನುವಾರ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೆ 10-12 ಗಂಟೆಯಲ್ಲಿ ಅನಸ್ತೇಶಿಯಾದಲ್ಲಿರಿಸಬೇಕಿತ್ತು. ಈಗ 3 ತಾಸು ಸಾಕು. ಇಂತಹ ಪ್ರಯೋಗ ನಮ್ಮ ಆಸ್ಪತ್ರೆಯಲ್ಲಿ ಮಾಡಿರುವುದು ಅಭಿನಂದನೀಯ. ಮುಂದೆ ಎಂ.ಆರ್.ಐ. ಸ್ಕಾೃನಿಂಗ್ ಯಂತ್ರ ಅಳವಡಿಸಲಾಗುವುದು. ಇಂದಿನ ಸಾಧನೆ ನುರಿತ ತಂಡದ ಕಾರ್ಯ. ಇನ್ನು ಹಳ್ಳಿಯ ಆಸ್ಪತ್ರೆಯ ಬಗೆಗೆ ವಿಶ್ವಾಸ ಬರಲು ಸಾಧ್ಯವಾಗಿದೆ ಎಂದರು.

ಡಾ.ಹೇಮಾವತಿ ವೀ.ಹೆಗ್ಗಡೆ ಮಾತನಾಡಿ, ಆಸ್ಪತ್ರೆ ಬೆಳವಣಿಗೆ ನೋಡಿ ಅದನ್ನು ಸ್ಥಾಪಿಸಿದವರಿಗೆ ಸಂತೋಷವಾಗುತ್ತದೆ. ಇದೊಂದು ಪವಾಡಸದೃಶ ಸಾಧನೆ. ನ್ಯಾಚುರೋಪತಿಯಲ್ಲಿ ಅನೇಕ ರೋಗಗಳು ಪಂಚತತ್ವದಡಿ ಗುಣವಾಗಿದ್ದಿದೆ. ಅದೇ ರೀತಿ ಎಸ್.ಡಿ.ಎಂ. ಆಸ್ಪತ್ರೆಯ ಈ ಸಾಧನೆಗೆ ವೈದ್ಯರನ್ನು ಅಭಿನಂದಿಸುತ್ತೇನೆ ಎಂದರು.

ಖ್ಯಾತ ಬೆನ್ನುಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಮಹೇಶ್ ಕೆ. ಮಾತನಾಡಿ, ಒಂದು ವರ್ಷದಲ್ಲಿ 50ಕ್ಕೂ ಮಿಕ್ಕಿ ಎಂಡೋಸ್ಕೋಪಿ ಸರ್ಜರಿ ಮಾಡಿದ್ದೆವು. ಹಿಂದೆ ಶೇ.5ರಿಂದ 10ರವರೆಗೆ ತೆರೆದ ಸರ್ಜರಿ ಆಗುತ್ತಿತ್ತು. ಆದರೆ ಇತ್ತೀಚೆಗೆ ಸಂಪೂರ್ಣ ನಿಲ್ಲಿಸಲಾಗಿದೆ. ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಎಲ್ಲ ಗುಣಮಟ್ಟದ ಸೌಲಭ್ಯಗಳಿಂದಾಗಿ ರೋಗಿಗಳಿಗೆ ಗುಣಮಟ್ಟದ ಸರ್ಜರಿ ಜತೆಗೆ ಕಡಿಮೆ ವೆಚ್ಚದಲ್ಲಿ ನಡೆಸಲು ಸಹಕಾರಿಯಾಗಿದೆ ಎಂದರು.

ಡಾ.ಶತಾನಂದ ಪ್ರಸಾದ್ ರಾವ್ ಮಾತನಾಡಿ, ಡಾ.ಮಹೇಶ್ ಈವರೆಗೆ 2500ಕ್ಕೂ ಅಧಿಕ ಸರ್ಜರಿ ಮಾಡಿದ್ದಾರೆ. ಓಪನ್ ಸರ್ಜರಿಯಿಂದ ಬಹಳ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಆದರೆ ಬಹಳ ಎಚ್ಚರಿಕೆಯಿಂದ ಸ್ಪೈನಲ್ ಕಾರ್ಡ್ ಟ್ಯೂಮರ್‌ನ್ನು ತೆರವು ಮಾಡಲಾಗಿದೆ. 3 ದಿನಗಳಲ್ಲಿ ರೋಗಿ ಗುಣಮುಖರಾಗಿದ್ದಾರೆ. ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ನರದೊಳಗೆ ಅವರೇ ಸಿದ್ಧಪಡಿಸಿದ ಯಂತ್ರ ಮೂಲಕ ಹೊಲಿಗೆ ಹಾಕಿರುವುದು ವಿಶ್ವದಲ್ಲೇ ಮೊದಲು ಎಂದರು.

ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆ, ಶಸ್ತ್ರಚಿಕಿತ್ಸೆ ನೆರವೇರಿಸಿದ ಖ್ಯಾತ ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಮಹೇಶ್ ಕೆ., ಡಾ.ಶತಾನಂದ ಪ್ರಸಾದ್ ರಾವ್, ಅರಿವಳಿಕೆ ತಜ್ಞರಾದ ಡಾ.ಚೈತ್ರಾ, ಎಸ್.ಡಿ.ಎಂ. ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ದೇವೇಂದ್ರ, ಡಾ.ಚೈತ್ರಾ ಉಪಸ್ಥಿತರಿದ್ದರು.

65 ವರ್ಷದ ರೋಗಿಗೆ ಕ್ರಿಟಿಕಲ್ ಸರ್ಜರಿ

65 ವರ್ಷ ವಯಸ್ಸಿನ ಮಹಿಳೆಯೊಬ್ಬರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ನಡೆಯಲು ಕಷ್ಟಪಡುತ್ತಿದ್ದರು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಬೆನ್ನುಮೂಳೆಯಲ್ಲಿ ಗಡ್ಡೆ ಇರುವುದು ತಿಳಿಯಿತು. ಡಾ.ಮಹೇಶ್ ಕೆ ಮತ್ತು ಡಾ.ಶತಾನಂದ ಪ್ರಸಾದ್ ರಾವ್ ನೇತೃತ್ವದ ತಜ್ಞರ ತಂಡ ಗಡ್ಡೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಈ ಶಸ್ತ್ರಚಿಕಿತ್ಸೆಯು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿದೆ. ಸತತ 6 ಗಂಟೆಗಳ ನಡೆದ ಪ್ರಕ್ರಿಯೆಯಲ್ಲಿ ತಜ್ಞರ ತಂಡ ಸಂಪೂರ್ಣ ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಕೇವಲ 1 ಸೆಂ.ಮೀ. ಛೇದನದೊಂದಿಗೆ 3 ಸೆಂ.ಮೀ ಗಡ್ಡೆ ಯಶಸ್ವಿಯಾಗಿ ಹೊರತೆಗೆಯಲಾಗಿದೆ.

ಎಂಡೋಸ್ಕೋಪಿಕ್ ಪ್ರಯೋಜನಗಳು

  1. ಶಸ್ತ್ರಚಿಕಿತ್ಸೆ ಸಮಯ ಮತ್ತು ನಂತರ ಕಡಿಮೆ ನೋವು.
  2. 1 ಸೆಂ.ಮೀ ಛೇದನ ಮೂಲಕ ಎಂಡೋಸ್ಕೋಪಿಕ್ ಕ್ಯಾಮರಾ ರವಾನೆ, ಗಡ್ಡೆ ನಿವಾರಣೆ
  3. ತ್ವರಿತ ಚೇತರಿಕೆ
  4. ಕನಿಷ್ಟ ರಕ್ತಸ್ರಾವ, ಅಂಗಾಂಶ ಹಾನಿ
  5. ಹೆಚ್ಚಿನ ರೋಗಗಳ ಚಿಕಿತ್ಸೆಯಲ್ಲಿ ಅತ್ಯಮೂಲ್ಯ

ಶಸ್ತ್ರಚಿಕಿತ್ಸಾ ತಂಡ

ಎಂಡೋಸ್ಕೋಪಿಕ್ ಸ್ಪೈನ್ ಸರ್ಜರಿಯಲ್ಲಿ ಫೆಲೋಶಿಪ್ ಪಡೆದಿರುವ ಖ್ಯಾತ ಬೆನ್ನುಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ.ಮಹೇಶ್ ಕೆ, ಮೂಳೆ ಶಸ್ತ್ರಚಿಕಿತ್ಸಕ ಲಂಬರ್ ಸ್ಪೈನ್ ಸರ್ಜರಿ ಮತ್ತು ಎಂಡೋಸ್ಕೋಪಿಕ್ ಸ್ಪೈನ್ ಸರ್ಜರಿಯಲ್ಲಿ ವರ್ಚುವಲ್ ಫೆಲೋಶಿಪ್ ಪಡೆದಿರುವ ಡಾ. ಶತಾನಂದ ಪ್ರಸಾದ್ ರಾವ್, ಅರಿವಳಿಕೆ ತಜ್ಞ ಡಾ.ಚೈತ್ರಾ ಆರ್. ನೇತೃತ್ವದ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಅರಿವಳಿಕೆ ತಂತ್ರಜ್ಞರಾದ ರಂಜಿತ್ ಮತ್ತು ಅಮಿತಾ ಅವರ ಅಸಾಧರಣ ಕೌಶಲ ಮತ್ತು ದಾದಿಯರಾದ ಜ್ಯೋತಿ ಮತ್ತು ಶ್ವೇತಲ್ ಅವರ ಆರೈಕೆಯ ಪರಿಣತಿ ಪ್ರಮುಖ ಪಾತ್ರವಹಿಸಿದೆ.

ಅತಿ ಕಡಿಮೆ ದರ

ಶಸ್ತ್ರಚಿಕಿತ್ಸೆಯ 2 ತಿಂಗಳ ಬಳಿಕ ರೋಗಿಯನ್ನು ಸ್ಕಾೃನಿಂಗ್ ನಡೆಸಿ ಆಪರೇಷನ್ ಸಂಪೂರ್ಣ ಯಶಸ್ವಿಯಾಗಿರುವುದನ್ನು ಖಾತ್ರಿಪಡಿಸಲಾಗಿದೆ. ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ, ಪೂಜ್ಯ ಹೆಗ್ಗಡೆಯವರು, ಮಾತೃಶ್ರೀ ಅಮ್ಮನವರು ಹಾಗೂ ಡಿ.ಹರ್ಷೇಂದ್ರ ಕುಮಾರ್ ಅವರ ಆಶೀರ್ವಾದ ಮತ್ತು ವೈದ್ಯರ ಕಠಿಣ ಪರಿಶ್ರಮದಿಂದ ರೋಗಿಯು ಸಂಪೂರ್ಣ ಗುಣಮುಖರಾಗಿ ಮೊದಲಿನಂತೆ ನಡೆದಾಡುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ರೋಗಿಗೆ ಹೊರೆಯಾಗದಂತೆ ಅತಿ ಕಡಿಮೆ ದರದಲ್ಲಿ ಅಂದರೆ ಕೇವಲ 1 ಲಕ್ಷ ಎರಡು ಸಾವಿರ ರೂ.ನಲ್ಲಿ ಮಾಡಲಾಗಿದೆ.

ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಶ್ಲಾಘನೆ

ಬೆನ್ನುಮೂಳೆ ಗಡ್ಡೆಯ ಶಸ್ತ್ರಚಿಕಿತ್ಸೆ ಬಹುತೇಕ ಎಲ್ಲ ಕಡೆ ನಡೆದರೂ ಆಪರೇಶನ್ ವೇಳೆ ಡ್ಯೂರಲ್ ಹಾನಿ ಸರಿಪಡಿಸುವ ಹೊಲಿಗೆ ಮಾಡುವಲ್ಲಿ ಇದುವರೆಗೆ ಎಲ್ಲಿಯೂ ಯಶಸ್ವಿಯಾಗಲಿಲ್ಲ. ಡೆಹಾರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೈನ್ ಸರ್ಜರಿ ವೈದ್ಯರ ಸಮಾವೇಶದಲ್ಲಿ ನಮ್ಮ ಆಸ್ಪತ್ರೆಯಲ್ಲಿ ನಡೆದ ಈ ಯಶಸ್ವಿ ಶಸ್ತ್ರಚಿಕಿತ್ಸೆಯ ವಿಷಯ ಪ್ರಸ್ತಾಪವಾಗಿದ್ದು, ಬೆನ್ನುಮೂಳೆ ಸರ್ಜರಿಯಲ್ಲಿ ವಿಶ್ವದಲ್ಲಿಯೇ ಹೆಸರುವಾಸಿಯಾದ ದಕ್ಷಿಣ ಕೊರಿಯಾದ ಸ್ಪೈನ್ ಸರ್ಜರಿ ವೈದ್ಯರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ತಮ್ಮ ಸಂತೋಷ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net