ನಿರ್ಲಕ್ಷ್ಯದಿಂದ ಬಗೆಹರಿಯದ ಸಮಸ್ಯೆ: ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಆಕ್ರೋಶ

30_08_Mdy_04(S.D.Jayaram Badavane)
Published on

ಮಂಡ್ಯ: ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಎಸ್.ಡಿ.ಜಯರಾಮ್ ಬಡಾವಣೆ ನಿವಾಸಿಗಳಿಗೆ ಸೌಲಭ್ಯ ಮರೀಚಿಕೆಯಾಗಿದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಎಸ್.ಡಿ.ಜಯರಾಮ್ ಬಡಾವಣೆಯ ನಿವಾಸಿಗಳ ಮನವಿಯ ಮೇರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು. ಅಧಿಕಾರಿಗಳ ತಾತ್ಸಾರ ಮನೋಭಾವದಿಂದಾಗಿ ಸ್ಥಳೀಯರು ತ್ರಿಶಂಕು ಸ್ಥಿತಿ ತಲುಪುವಂತಾಗಿದೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಹಂಚಿದ್ದರೂ ಸಹ ಇದುವರೆಗೂ ಈ ಬಡಾವಣೆ ನಿವಾಸಿಗಳು ನಗರಸಭೆ ವ್ಯಾಪ್ತಿಗೆ ಸೇರುತ್ತಾರೋ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತಾರೋ ಎನ್ನುವುದು ಗೊತ್ತಾಗದಂತಾಗಿದೆ ಎಂದರು.
2014-15ಕ್ಕೂ ಮುನ್ನ ಮಂಡ್ಯ ನಗರಸಭೆಯ 35ನೇ ವಾರ್ಡ್‌ಗೆ ಸೇರಿದ ಈ ಬಡಾವಣೆಯನ್ನು ಬಳಿಕದ ದಿನದಲ್ಲಿ ಸಾತನೂರು ಬಡಾವಣೆ ಎಂದು ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಹಕ್ಕು ಪತ್ರಗಳನ್ನು ನೀಡಿತ್ತು. ಆದರೆ ಈಗ ಸಾತನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಪರಿಣಾಮ ಮೂಲ ಸೌಕರ್ಯವೇ ಇಲ್ಲದೇ, ಅಧಿಕಾರಿಗಳ ತಿಕ್ಕಾಟದಿಂದ ತಮ್ಮ ಮಕ್ಕಳಿಗೆ ವಾಸಸ್ಥಳ ದೃಢೀಕರಣ ಪತ್ರ ಸಿಗದೇ, ಉದ್ಯೋಗ ಖಾತ್ರಿ ಅಂತಹ ಯೋಜನೆಗಳಿಂದ ವಂಚಿತರಾಗಿ ಬದುಕು ಸಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಕೂಡಲೇ ಜಿಲ್ಲಾಡಳಿತಕ್ಕೆ ಏನಾದರೂ ಜನಪರ ಸೇವೆ ವಾಡುವ ಆಸಕ್ತಿ ಇದ್ದರೆ ಮೊದಲು ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳ ಸಭೆ ಕರೆದು ಈ ಸಮಸ್ಯೆಯನ್ನು ಪರಿಹರಿಸಿಕೊಡಬೇಕು. ಇಲ್ಲದಿದ್ದರೆ ಸ್ಥಳೀಯ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net