

ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿ ಸಿಂಗಲ್ ಬೆಡ್ ಮತ್ತು ಬೆಡ್‌ಶೀಟ್ ಮಾರಾಟಕ್ಕಿಟ್ಟಿದ್ದ ಮಹಿಳೆಗೆ ಗ್ರಾಹಕನ ಸೋಗಿನಲ್ಲಿ ಸೈಬರ್ ಕಳ್ಳರು 2.64 ಲಕ್ಷ ರೂ. ವಂಚನೆ ಮಾಡಿದ್ದಾರೆ.
ಮಲ್ಲಸಂದ್ರದ 43 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಕೆಲ ದಿನಗಳ ಹಿಂದೆ ಹಳೆಯ ಸಿಂಗಲ್ ಬೆಡ್ ಮತ್ತು ಬೆಡ್‌ಶೀಟ್‌ನ್ನು ಒಎಲ್‌ಎಕ್ಸ್‌ನಲ್ಲಿ ಮಹಿಳೆ ಮಾರಾಟಕ್ಕಿಟ್ಟು, ಮೊಬೈಲ್ ನಂಬರ್ ಅಪ್‌ಲೋಡ್ ಮಾಡಿದ್ದರು.
ಇದನ್ನು ಗಮನಿಸಿದ ಸೈಬರ್ ಕಳ್ಳ, ಮಹಿಳೆ ಮೊಬೈಲ್‌ಗೆ ಕರೆ ಮಾಡಿ ಬೆಡ್ ಮತ್ತು ಬೆಡ್‌ಶೀಟ್ ಖರೀದಿ ಮಾಡಲು ಬಯಸಿದ್ದೇನೆ. ಆನ್‌ಲೈನ್‌ನಲ್ಲಿ ಹಣವನ್ನು ವರ್ಗಾವಣೆ ಮಾಡುತ್ತೆನೆ ಎಂದು ಹೇಳಿ ಯುಪಿಎ ಲಿಂಕ್ ಒಂದನ್ನು ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ ಎಂದು ಹೇಳಿದ್ದಾನೆ. ಸ್ವಲ್ಪ ಹೊತ್ತಿಗೆ ತನ್ನ ಮೊಬೈಲ್‌ಗೆ ಬಂದ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಮಹಿಳೆ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2.54 ಲಕ್ಷ ರೂ. ಕಡಿತವಾಗಿದೆ. ಎಚ್ಚೆತ್ತುಕೊಳ್ಳುವ ವೇಳೆಗೆ ಹಣವೇ ಖಾಲಿ ಆಗಿದೆ. ವಾಪಸ್ ಗ್ರಾಹಕನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು.
ಕೊನೆಗೆ ಠಾಣೆಗೆ ಬಂದು ದೂರು ನೀಡಿದ್ದಾರೆ. ವ್ಯಾಲೆಟ್‌ನಲ್ಲಿ ಒನ್ ಟೈಮ್ ಪಾಸ್‌ವರ್ಡ್ ಅಥವಾ ಕ್ಯೂಆರ್ ಕೋಡ್‌ನ್ನು ಲಿಂಕ್‌ನಲ್ಲಿ ಕಳುಹಿಸಿ ಸೈಬರ್ ಕಳ್ಳರು ಸುಲಭವಾಗಿ ಬ್ಯಾಂಕ್ ಖಾತೆಗೆ ಕನ್ನಹಾಕುತ್ತಿದ್ದಾರೆ. ಸಾಮಾನ್ಯ ಜನರಿಗೆ ಅರಿವು ಇಲ್ಲದೆ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.