

ಧಾರವಾಡ: ಕನ್ನಡದಲ್ಲಿ ಬೆಲೆ ನಮೂದು ಮಾಡಿದ್ದ ಕಾರಣಕ್ಕೆ ಚೆಕ್ ಅನ್ನು ಅಮಾನ್ಯ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರಮಕ್ಕೆ ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಧಾರವಾಡದ ಗ್ರಾಹಕರ ಕೋರ್ಟ್, ಬ್ಯಾಂಕ್ಗೆ ದಂಡ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ವಾದಿರಾಜಾಚಾರ್ಯ ಇನಾಮದಾರ ಅವರು ಎಸ್‌ಬಿಐ ವಿರುದ್ಧ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಬ್ಯಾಂಕ್ಗೆ ಆಯೋಗವು 85,177 ರೂಪಾಯಿಗಳ ದಂಡ ವಿಧಿಸಿದೆ.
ವಾದಿರಾಜಾಚಾರ್ಯ ಅವರು, ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಚೆಕ್ ಮೂಲಕ ಇವರು ವಿದ್ಯುತ್ ಬಿಲ್ ಪಾವತಿ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ 6000 ರೂ. ಬಿಲ್ ಕಟ್ಟಬೇಕಿತ್ತು. 6000 ಎಂದು ಅವರು ಕನ್ನಡದಲ್ಲಿ ಬರೆದಿದ್ದರು. ಇದು ಇಂಗ್ಲಿಷ್ನಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಬ್ಯಾಂಕ್ ಚೆಕ್ ಅನ್ನು ಅಮಾನ್ಯ ಮಾಡಿದ್ದರಿಂದ ವಿದ್ಯುತ್ ಬಿಲ್ ಕಟ್ಟಲು ವಾದಿರಾಜಾಚಾರ್ಯ ಅವರಿಗೆ ಸಾಧ್ಯವಾಗಲಿಲ್ಲ. ಬಿಲ್ ಕಟ್ಟಿಲ್ಲ ಎನ್ನುವ ಕಾರಣಕ್ಕೆ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಯಿತು.
ಇದರಿಂದ ಆಕ್ರೋಶಗೊಂಡ ವಾದಿರಾಜಾಚಾರ್ಯ ಅವರು, ಈ ಕ್ರಮ ಪ್ರಶ್ನಿಸಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. 'ನನ್ನ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇದೆ. ಆದರೂ ಕನ್ನಡದಲ್ಲಿ ಬರೆದೆ ಎನ್ನುವ ಕಾರಣಕ್ಕೆ 6 ಸಾವಿರ ರೂಪಾಯಿ ಚೆಕ್ ಅಮಾನ್ಯ ಮಾಡಲಾಗಿದೆ. ಈ ಮೂಲಕ ಬ್ಯಾಂಕ್ ಸೇವಾ ನ್ಯೂನ್ಯತೆ ಎಸಗಿದೆ' ಎಂದು ಅವರು ದೂರಿದ್ದರು.
ಎಸ್‌ಬಿಐ ಕ್ರಮವನ್ನು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ , ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಗಂಭೀರವಾಗಿ ಪರಿಗಣಿಸಿದರು. ಈ ಹಿನ್ನೆಲೆಯಲ್ಲಿ ದೂರುದಾರರಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದ್ದಾರೆ.
'ನಾನು ಇಂಗ್ಲಿಷ್ ಉಪನ್ಯಾಸಕನಾಗಿದ್ದರೂ ಎಲ್ಲ ವ್ಯವಹಾರಕ್ಕೂ ಕನ್ನಡ ಬಳಕೆ ಮಾಡುತ್ತಿದ್ದೇನೆ. ಈ ಘಟನೆಯಿಂದ ನನಗೆ ತುಂಬಾ ನೋವಾಗಿತ್ತು. ಇದೀಗ ಕರ್ನಾಟಕದಲ್ಲಿಯೇ ಕನ್ನಡವನ್ನು ಕಡೆಗಣನೆ ಮಾಡುತ್ತಿರುವವರಿಗೆ ಕೋರ್ಟ್ ತಕ್ಕ ಶಿಕ್ಷೆ ನೀಡಿದೆ' ಎಂದು ವಾದಿರಾಜಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
'ಬ್ಯಾಂಕ್ಗಳಲ್ಲಿ ತ್ರಿಭಾಷಾ ನೀತಿಯಡಿಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆಯನ್ನು ಎತ್ತಿಹಿಡಿಯುವುದರಿಂದ ಈ ಆದೇಶ ಮಹತ್ವದ್ದು ಎನಿಸಿದೆ. ಈ ಆದೇಶ ಒಂದು ನಿದರ್ಶನವಾಗಬೇಕು. ಪಿಎಸ್ಯು ಮತ್ತು ಕೇಂದ್ರ ಕಚೇರಿಗಳು ಪ್ರಾದೇಶಿಕ ಭಾಷೆಗಳನ್ನು ಗೌರವಿಸುವುದಿಲ್ಲ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್ನಾಗಭೂಷಣ ಹೇಳಿದ್ದಾರೆ. (ಏಜೆನ್ಸೀಸ್)