ಕಾಂಗ್ರೆಸ್​ ಬಂದರೆ ಹೊರ ಗುತ್ತಿಗೆಯಲ್ಲೂ ಮೀಸಲು, ತಿಂಗಳೊಳಗೆ ಖಾಲಿ ಹುದ್ದೆ ಭರ್ತಿ ಎಂದ ಸಿದ್ದು, ಡಿಕೆಶಿ

sankalpa
Published on

ಬೆಂಗಳೂರು: ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ತರುತ್ತೇವೆ. ಇದನ್ನು ರಾಷ್ಟ್ರ ಮಟ್ಟದಲ್ಲೂ ಪಕ್ಷ ಹೇಳಿದೆ. ಇಲ್ಲೂ ತರುತ್ತೇವೆ‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ನಡೆಯುತ್ತಿರುವ ನವ ಸಂಕಲ್ಪ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು. ಹೊರ ಗುತ್ತಿಗೆಯಲ್ಲೂ ಮೀಸಲು ತರಲು ಪ್ರಯತ್ನ ಮಾಡುತ್ತದೆ. ಮುಂದೆ ಹೊರ ಗುತ್ತಿಗೆ ಬದಲು ನೇಮಕಾತಿಯನ್ನೇ ಮಾಡುತ್ತೇವೆ. ಈ ಸರ್ಕಾರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಆದ್ಯತೆ ಮೇಲೆ ನೇಮಕ ಮಾಡುತ್ತೇವೆ ಎಂದರು.

ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ಹೋರಾಡಲಿದೆ. ಮುಸ್ಲಿಮರು, ಕ್ರೈಸ್ತರ ಮೇಲೆ ಸುಳ್ಳು ಕೇಸು ಹಾಕುವುದು, ದೌರ್ಜನ್ಯ ಮಾಡುವುದನ್ನು ನಾವು ಖಂಡಿಸುತ್ತೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಎಐಸಿಸಿಯು ರಾಜಸ್ತಾನದ ಉದಯಪುರ ಶಿಬಿರದ ರೀತಿಯಲ್ಲಿ ರಾಜ್ಯದಲ್ಲಿ ಕೂಡ ಶಿಬಿರ ನಡೆಸಿದೆವು. ಆರು ತಂಡ ರಚಿಸಿದ್ದೆವು. ರೈತ, ಬೆಲೆ ಏರಿಕೆ, ಉದ್ಯೋಗ, ಆರ್ಥಿಕ, ಸಾಮಾಜಿಕ ನ್ಯಾಯ, ಮಹಿಳೆ ಉದ್ಯೋಗ, ಪಕ್ಷ ಸಂಘಟನೆ, ರಾಜಕೀಯ ವಿಚಾರವಾಗಿ ಸಮಿತಿ ರಚಿಸಿ ಚರ್ಚೆ ಮಾಡಲಾಯಿತು. 600 ಆಹ್ವಾನಿತರನ್ನು ಶಿಬಿರಕ್ಕೆ ಆಹ್ವಾನಿಸಿದ್ದೆವು. ಶಾಸಕರು, ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು ಸೇರಿ ವಿವಿಧ ಘಟಕಗಳ ಮುಖ್ಯಸ್ಥರು ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಪ್ರಣಾಳಿಕೆಗೂ ಸಲಹೆ ಬಂದಿದೆ ಎಂದು ಹೇಳಿದರು.

ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಎಲ್ಲ ವರ್ಗದ ಜನರಿಗೆ ರಕ್ಷಣೆ ಕೊಡಲು ನಾವು ಬದ್ಧ.‌ ಕೋಮು ವಿಚಾರದಲ್ಲಿ ಧ್ರುವೀಕರಣ, ಭ್ರಷ್ಟಾಚಾರದಿಂದ ರಾಜ್ಯದ ಹೆಸರು ಹಾಳಾಗುತ್ತಿದೆ. ರಾಜ್ಯದ ಹೆಸರು ಉಳಿಸಲು ಕಾರ್ಯಕ್ರಮ ರೂಪಿಸುತ್ತೇವೆ ಎಂದು ಡಿಕೆಶಿ ಹೇಳಿದರು.

ಬಿಜೆಪಿ ಸರ್ಕಾರ ಬಂದ ಮೇಲೆ ಬಹಣಲ ಜನರಿಗೆ ನೋವಾಗಿದೆ. ಮುಸ್ಲಿಮ್ ಕ್ರೈಸ್ತರ ಮೇಲೆ ದೌರ್ಜನ್ಯ ಆಗುತ್ತಿರುವುದನ್ನು ಖಂಡಿಸಿ, ಅವರ ಜತೆ ನಿಲ್ಲಿಸುತ್ತೇವೆ. ರೈತರ ವಿಚಾರದಲ್ಲಿ ತಂದ ಕಾಯ್ದೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿಲ್ಲ. ಈ ವಿಚಾರ ವಾಪಸ್ ಪಡೆಯಲು ತೀವ್ರ ಹೋರಾಟ ಮಾಡುತ್ತೇವೆ. ಸಂಘಟನೆ ವಿಚಾರದಲ್ಲಿ ಆಲೋಚನೆ ಮಾಡಿದ್ದೇವೆ. ತಿಂಗಳೊಳಗೆ ಪಕ್ಷದ ಖಾಲಿ ಹುದ್ದೆಯನ್ನು ಭರ್ತಿ ಮಾಡುತ್ತೇವೆ‌. ಬದಲಾವಣೆ ಗಳನ್ನು ಮಾಡುತ್ತೇವೆ. ಜೂ.25 ಸ್ಥಳೀಯ ಘಟಕಗಳ ಚುನಾವಣೆ ಮಾಡಲಾಗುತ್ತದೆ. ಚುನಾವಣೆಯಲ್ಲಿ ಮಹಿಳಾ ಶೇ.33 ಮೀಸಲು ಕೊಡಲಾಗುತ್ತದೆ. ಎಲ್ಲಾ ವರ್ಗದವರಿಗೂ ಅವಕಾಶ ಕೊಡಲಾಗುತ್ತದೆ ಎಂದು ನುಡಿದರು.

ವಾರ್ಡ್ ಹಾಗೂ ಪಂಚಾಯಿತಿ ಘಟಕ ರಚಿಸಲಾಗುತ್ತದೆ. ಜಾತಿಯ ಅನುಗುಣವಾಗಿ ಪಕ್ಷದಲ್ಲಿ ಮೀಸಲು ಕೊಡುತ್ತೇವೆ. ಅದೇ ರೀತಿ ರಾಜ್ಯದಲ್ಲೂ ಗಮನ‌ಕೊಡುತ್ತೇವೆ. ಶೇ.ಐವತ್ತರಷ್ಟು ಯುವಕರಿಗೆ ನೀಡಲಾಗುತ್ತದೆ. ಪ್ರತಿ‌ ಸಮಿತಿಯಲ್ಲೂ ಐವತ್ತು ವರ್ಷದೊಳಗಿನವರಿಗೆ ಆದ್ಯತೆ ಕೊಡಲಾಗುತ್ತದೆ. ಬಿಬಿಎಂಪಿ, ಜಿಪಂ, ತಾಪಂ ಎಲ್ಲ ಕಡೆಯೂ ಇದೇ ರೀತಿ ಅವಕಾಶ ಕೊಡಲಾಗುತ್ತದೆ.

ನಶೆ ಬೇಡ, ನೌಕರಿ ಬೇಕು ಎಂಬ ಆಂದೋಲನ ನಡೆಸಲಾಗುತ್ತದೆ. ಸ್ವಾವಲಂಬಿಯಾಗಿ ಬದುಕಲು ಅವಕಾಶ ಕೊಡಲು, ಕೋಮು ಜಾತಿ ವಿಚಾರ,ಚದ್ವೇಷ, ರಾಜಕೀಯ ನಶೆಯ ಬದಲಾವಣೆ ತರುತ್ತಿದ್ದಾರೆ. ಈ ಕಾರಣಕ್ಕೆ ಕಾರ್ಯಕ್ರಮ ರೂಪಿಸಿ ಅವರ ದನಿಯಾಗುತ್ತೇವೆ.‌ ನಗರ, ಹಳ್ಳಿಯಲ್ಲಿ ಯುವಕರಿಗೆ ಉದ್ಯೋಗ ಕೊಡಲು ಕಾರ್ಯಕ್ರಮ ರೂಪಿಸುತ್ತೇವೆ. ನಗರ ಪ್ರದೇಶದಲ್ಲಿ ನರೇಗಾ ಮಾದರಿ ಉದ್ಯೋಗ ಖಾತರಿ ಯೋಜನೆ ತರಲು ಕಾರ್ಯಕ್ರಮ ರೂಪಿಸುತ್ತೇವೆ‌. ಸರ್ಕಾರಿ ಉದ್ಯೋಗ ನೇಮಕ ವೇಳೆ ಭ್ರಷ್ಟಾಚಾರದಿಂದ ಮುಕ್ತಿಕೊಡಲು ಸಮಗ್ರ ಬದಲಾವಣೆ ತರಲು ಕಾರ್ಯಕ್ರಮ‌ಮಾಡುತ್ತೇವೆ. ಕಮಿಷನ್, ಲಂಚಕ್ಕೆ ಬ್ರೇಕ್ ಹಾಕಲು ಕಾರ್ಯಕ್ರಮ ರೂಪಿಸುತ್ತೇವೆ‌ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಕರಾವಳಿ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಬಯಲು ಸೀಮೆ, ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡುತ್ತೇವೆ. ವಲಸೆ ಹೋಗುವುದನ್ನು ತಡೆಯಲು ಗೋವಾ ಮಾದರಿ, ಕೇರಳ ಮಾದರಿಯಲ್ಲಿ ಪ್ತವಾಸೋದ್ಯಮಕ್ಕೆ ಕಾರ್ಯಕ್ರಮ ಮಾಡುತ್ತೇವೆ. ಎಸ್ಸಿಪಿ ಟಿಎಸ್ಪಿ ಕಾಯ್ದೆ ವಿಚಾರದಲ್ಲಿ 7 ಡಿ ಕಲಂ ರದ್ದು ಪಡಿಸಿ ಈ ಸರ್ಕಾರ ಕೆಲವು ಬದಲಾವಣೆ ತಂದಿದ್ದಾರೆ. ಅದನ್ನು ಖಂಡಿಸುತ್ತೇವೆ.‌ ಜನ‌ಸಂಖ್ಯೆ ಆಧಾರದದಲ್ಲಿ ಹಣ ಕೊಡುತ್ತೇವೆ ಎಂದು ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net