

ಚಿತ್ರದುರ್ಗ: ಕೆಲ ತಿಂಗಳುಗಳಿಂದ ಮತಾಂತರದ ಕುರಿತಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮತಾಂತರ ನಿಷೇಧ ಕಾಯ್ದೆ ಕುರಿತು ಪರ-ವಿರೋಧ ಚರ್ಚೆಗಳೂ ಶುರುವಾಗಿವೆ. ಮತಾಂತರ ನಡೆಯುತ್ತಿರುವ ಬಗ್ಗೆ ಹಲವು ಸಾಕ್ಷ್ಯಾಧಾರಗಳು ಸಿಕ್ಕಿದ್ದರೂ ಇಂಥದ್ದೊಂದು ಘಟನೆ ನಡೆದೇ ಇಲ್ಲ ಎನ್ನುತ್ತಿದ್ದಾರೆ ಕೆಲವರು.
ಇದರ ಬೆನ್ನಲ್ಲೇ ಕುತೂಹಲದ ಬೆಳವಣಿಗೆಯೊಂದರಲ್ಲಿ, ಮತಾಂತರ ನಡೆಯುತ್ತಲೇ ಇಲ್ಲ ಎಂದಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಹಸೀಲ್ದಾರ್ ತಿಪ್ಪೇಸ್ವಾಮಿ ದಿಢೀರ್ ಎತ್ತಂಗಡಿ ಮಾಡಲಾಗಿದೆ!
ವಿಧಾನಸಭೆ ಅಧಿವೇಶನದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಗೂಳಿಹಟ್ಟಿ ಶೇಖರ್ ಅವರು ತಮ್ಮ ತಾಯಿಗೆ ಬಲವಂತದ ಮತಾಂತರ ಮಾಡಿರುವುದಾಗಿ ಹೇಳಿದ್ದರು. ತಮ್ಮ ಅಮ್ಮ ಹೇಗೆ ಹಿಂದೂ ಧರ್ಮ ತ್ಯಜಿಸಿಬಿಟ್ಟರು ಎಂಬ ಬಗ್ಗೆ ಹೇಳತ್ತಾ ಕಣ್ಣೀರಿಟ್ಟಿದ್ದರು. ಆದರೆ ಇವೆಲ್ಲವೂ ಸುಳ್ಳು. ಇಂಥ ಮತಾಂತರ ತಮ್ಮ ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದು ತಹಶೀಲ್ದಾರ್ ತಿಪ್ಪೇಸ್ವಾಮಿ ಹೇಳಿದ್ದರು.
ಹೊಸದುರ್ಗದಲ್ಲಿ ಬಲವಂತದ ಮತಾಂತರವಾಗಿಲ್ಲ ಎಂದು ನವೆಂಬರ್ 30ರಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಅವರನ್ನು ಈಗ ಬೇರೆ ಕಡೆ ವರ್ಗಾವಣೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅವರ ಜಾಗಕ್ಕೆ ಹೊಸದುರ್ಗದ ನೂತನ ತಹಸೀಲ್ದಾರ್ ಆಗಿ ಮಲ್ಲಿಕಾರ್ಜುನ್ ನಿಯೋಜನೆಗೊಂಡಿದ್ದಾರೆ. ಆದರೆ ತಿಪ್ಪೇಸ್ವಾಮಿ ಅವರಿಗೆ ಇನ್ನೂ ಯಾವುದೇ ಸ್ಥಳ ನಿಗದಿಯಾಗಿಲ್ಲ.