ಮೈಮೇಲೆ ಏನೋ ಹರಿದಂತಾಯ್ತು-ಕಣ್ಣುಬಿಟ್ಟು ನೋಡಿದ್ರೆ ಕಾಳಿಂಗ ಸರ್ಪ! ಕೊಪ್ಪದಲ್ಲಿ ಬೆಚ್ಚಿಬೀಳೋ ಘಟನೆ

kobra
Published on

ಚಿಕ್ಕಮಗಳೂರು: ರಾತ್ರಿ ಮಲಗಿದ್ದಾಗ ಮೈಮೇಲೆ ಏನೋ ಹರಿದಂತಾಗಿ, ಏನೋ ಇರಬಹುದು ಎಂದು ಸುಮ್ಮನಾಗಿ ಬೆಳಗ್ಗೆ ನೋಡಿದಾಗ ಮನೆಯಲ್ಲಿಯೇ ಕಾಳಿಂಗ ಸರ್ಪ ಇದ್ದರೆ ಏನಾಗಬೇಡ?

ನೆನೆಸಿಕೊಂಡರೂ ಮೈಯೆಲ್ಲಾ ಝುಂ ಎನ್ನುವ ಅನುಭವ ಆಗುತ್ತದೆಯಲ್ಲವೆ? ಆದರೆ ನಿಜವಾಗಿಯೂ ಅಂಥದ್ದೊಂದು ಘಟನೆ ನಡೆದಿದೆ. ಅದೂ ನಮ್ಮ ಕರ್ನಾಟಕದಲ್ಲಿಯೇ!

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ದಯಂಬಳ್ಳಿಯಲ್ಲಿ ಈ ಬೆಚ್ಚಿಬೀಳುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಅಗಳಗಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಯಂಬಳ್ಳಿ ಗ್ರಾಮದ ಸಂತೋಷ್ ಎಂಬುವವರ ಮನೆಯಲ್ಲಿ ನಾಗ ಎಂಬುವವರು ನಿನ್ನೆ ರಾತ್ರಿ ಮನೆಯ ಜಗುಲಿಯ ಮೇಲೆ ಮಲಗಿದ್ದರು. ರಾತ್ರಿ ಸುಮಾರು 9.30ರ ವೇಳೆ ಮೈಮೇಲೆ ಏನೋ ಹರಿದಂತಾಗಿದೆ.

ಆ ಕ್ಷಣದಲ್ಲಿ ಅವರು ಕಣ್ಣುಬಿಟ್ಟು ನೋಡಿದಾಗ ಏನೂ ಕಾಣಿಸಲಿಲ್ಲ. ಆದರೆ ಭಾರಿ ಗಾತ್ರದ ವಸ್ತುವೊಂದು ಹರಿದುಹೋಗಿದ್ದು ಅನುಭವಕ್ಕೆ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರು, ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ನಂತರ ಹೆದರಿದ ಮನೆಯವರು ಗಾಬರಿಯಿಂದ ಕತ್ತಲೆಯಲ್ಲಿ ಬ್ಯಾಟರಿ ಹಾಕಿ ಹುಡುಕಿದಾಗ ಮನೆಯ ಮೂಲೆಯಲ್ಲಿರುವ ರಟ್ಟಿನ ಬಾಕ್ಸ್ ಒಳಗೆ ಕಾಳಿಂಗ ಸರ್ಪ ಸೇರಿಕೊಂಡಿರುವುದು ಕಾಣಿಸಿದೆ.

ಇದನ್ನು ನೋಡಿ ಮನೆಯವರು ಬೆಚ್ಚಿಬೀಳೋದು ಬೇರೆ ಮಾತು ಬಿಡಿ. ಮೈಮೇಲೆ ಈ ಹಾವು ಹರಿದುಹೋಗಿರುವುದನ್ನು ತಿಳಿದು ನಾಗ ಅವರ ಸ್ಥಿತಿ ಹೇಗಾಗಿರಬೇಡ? ಆದರೆ ಅದೃಷ್ಟವಶಾತ್​ ಹಾವು ಇವರಿಗೆ ಏನೂ ಮಾಡಲಿಲ್ಲ. ನಂತರ ಶೃಂಗೇರಿಯ ಸ್ನೇಕ್ ಅರ್ಜುನ್ ಅವರಿಗೆ ಕರೆ ಮಾಡಿ ಹಾವನ್ನು ತೆಗೆದುಕೊಂಡು ಹೋಗಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net