

ಚಿಕ್ಕಮಗಳೂರು: ಹೆತ್ತವರ ಅಂತ್ಯಕ್ರಿಯೆ, ಅಂತಿಮ ವಿಧಿವಿಧಾನವನ್ನು ಗಂಡುಮಕ್ಕಳೇ ನಡೆಸಬೇಕು ಎಂದು ತಲೆತಲಾಂತರಗಳಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕೆ ತಮಗೆ ಗಂಡುಮಗುವೇ ಬೇಕು ಎನ್ನುವವರಿಗೇನೂ ಕಮ್ಮಿ ಇಲ್ಲ.
ಆದರೆ ಇದಕ್ಕೆ ಅಪವಾದ ಎಂಬಂತೆ ಅಲ್ಲೊಂದು, ಇಲ್ಲೊಂದು ಪ್ರಕರಣಗಳಲ್ಲಿ ಹೆಣ್ಣುಮಕ್ಕಳೇ ಪಾಲಕರ ಅಂತ್ಯಕ್ರಿಯೆಯನ್ನು ಮಾಡಿರುವ ಸುದ್ದಿಗಳನ್ನು ಕೇಳುತ್ತಲೇ ಬಂದಿದ್ದೇವೆ.
ಆದರೆ ಇದೀಗ ಚಿಕ್ಕಮಗಳೂರಿನ ಕುವರಿಯೊಬ್ಬಳು ತನ್ನ ತಂದೆಯ ಅಂತ್ಯಕ್ರಿಯೆಯನ್ನು ತಾನೇ ಮಾಡುವ ಮೂಲಕ ಹೆಣ್ಣುಮಕ್ಕಳೂ ಅಂತ್ಯಕ್ರಿಯೆಯನ್ನು ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಕರೊನಾದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರವನ್ನು ತಾನೇ ಮಾಡಬೇಕೆಂದು ಹಟ ಹಿಡಿದ ಅಪ್ಪನ ಮುದ್ದಿನ ಪುತ್ರಿ ಇದೀಗ ಪಿಪಿಇ ಕಿಟ್ ಧರಿಸಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾಳೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಬೆಂಗಳೂರಿನ ಬಿಡದಿಯ ಟೊಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈಕೆಯ ತಂದೆಗೆ (45 ವರ್ಷ) ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಹೆಣ್ಣುಮಕ್ಕಳು. ಇತ್ತೀಚೆಗಷ್ಟೇ ಬೆಂಗಳೂರಿನಿಂದ ಮಕ್ಕಳು ಮೂಡಿಗೆರೆಗೆ ಬಂದಿದ್ದರು.
ಅದಾಗಲೇ ತಂದೆಯ ಸಾವಿನ ಸುದ್ದಿ ಬಂದಿದೆ. ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಗೆ ಮೃತದೇಹ ತರಲಾಗಿತ್ತು. ಅಪ್ಪ ಗುಣಮುಖರಾಗಿ ವಾಪಸ್ ಬರುತ್ತಾರೆ ಎಂದುಕೊಂಡಿದ್ದ ಮಕ್ಕಳಿಗೆ ಇದು ಬರಸಿಡಿಲು ಬಡಿದಂತಾಗಿತ್ತು. ತನ್ನ ಪ್ರೀತಿಯ ಅಪ್ಪನ ಅಂತ್ಯಸಂಸ್ಕಾರವನ್ನು ತಾನೇ ಮಾಡುವುದಾಗಿ ಹಿರಿಯ ಮಗಳು ಹಟ ಹಿಡಿದಳು.
ನಂತರ ಎಲ್ಲರಿಗೂ ಪಿಪಿಇ ಕಿಟ್ ಕೊಟ್ಟು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟರು. ಹಿರಿಯ ಮಗಳೇ ತಂದೆಗೆ ಅಂತಿಮ ವಿಧಿವಿಧಾನ ನೆರವೇರಿಸಿದಳು.