

ನವದೆಹಲಿ: ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ರೈತರ ಪರವಾಗಿ, ಯುವ ಸಮೂಹದ ಪರವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರೊಬ್ಬ ಕಾಮನ್ ಮ್ಯಾನ್ ಸಿಎಂ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
100% ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. 150 ಕ್ಷೇತ್ರಗಳಲ್ಲಿ ಗೆದ್ದು ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದ್ದೇವೆ ಎಂದ ಅರುಣ್ ಸಿಂಗ್, ಸಿಎಂ ಬದಲಾವಣೆ ಕುರಿತಂತೆ ವಿನಾಕಾರಣ ಕಾಂಗ್ರೆಸ್ ಗೊಂದಲ ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದರು.
ಸಿಎಂ ಬದಲಾವಣೆ ಎನ್ನುವುದು ಕಾಂಗ್ರೆಸ್ ಷಡ್ಯಂತ್ರವಷ್ಟೇ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಡಕಿದೆ. ಅದನ್ನು ಮುಚ್ಚಿ ಹಾಕಲು ಸಿಎಂ ಬದಲಾವಣೆ ವಿಚಾರ ಹುಟ್ಟು ಹಾಕಿದ್ದಾರೆ. ಕಾಂಗ್ರೆಸ್ ನಾಯಕರೇ ಇಲ್ಲದ ಪಕ್ಷ ಎಂದು ಆರೋಪಿಸಿದರು.