

ಆನೇಕಲ್ (ಬೆಂಗಳೂರು ಗ್ರಾಮಾಂತರ): ಬಡಾವಣೆ ನಿರ್ಮಾಣ ಮಾಡುವ ಉದ್ದೇಶದಿಂದ ಅಕ್ಕಪಕ್ಕದ ಮನೆಯವರನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಿ ನಡೆದಿದೆ.
ಇದರಿಂದ ನೊಂದ ಜನರು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾರೆ! ಬೆಂಗಳೂರು ನಗರ ಮಧ್ಯದಲ್ಲಿ ಹಾಡುಹಗಲೇ ಸ್ಫೋಟಕಗಳ ಬಳಕೆ ಮಾಡಿದರೂ ಇದು ಯಾರ ಗಮನಕ್ಕೂ ಬರುತ್ತಿಲ್ಲ! ಗೊಟ್ಟಿಗೆರೆ ಸರ್ವೆ ನಂಬರ್ 61ರಲ್ಲಿ ಈ ಕಾರ್ಯ ನಡೆಯುತ್ತಿದೆ. ಮಾರುತಿ ನಗರದ ಕಮ್ಮನಹಳ್ಳಿ ಬ್ರಹ್ಮಕುಮಾರಿ ಆಶ್ರಮದ ಬಳಿ ವಾಸ ಇರುವ ಕಡುಬಡವರ ಸ್ಥಿತಿ ಹೇಳತೀರದಾಗಿದೆ.
ಅಕ್ಕಪಕ್ಕದಲ್ಲೇ ಬೃಹತ್ ಕಟ್ಟಡಗಳು ಇದ್ದರೂ ಸ್ಫೋಟಕಗಳನ್ನು ಬಳಸಿ ಬ್ಲಾಸ್ಟ್ ಮಾಡಲಾಗುತ್ತಿದ್ದು, ಬಡಾವಣೆ ನಿರ್ಮಾಣ ಮಾಡಲು ಇದು ಅನಿವಾರ್ಯ ಎನ್ನುತ್ತಿದ್ದಾರೆ ಬಿಲ್ಡರ್ಗಳು.
ಕಲ್ಲುಬಂಡೆ ಸ್ಫೋಟಕ್ಕೆ ಅಕ್ಕಪಕ್ಕದ ಮನೆಗಳು ಬಿರುಕುಬಿಟ್ಟಿದ್ದು ಒಂದೆಡೆಯಾದರೆ ಮನೆ ಖಾಲಿ ಮಾಡಲು ಬಲಾಢ್ಯರ ಬೆದರಿಕೆಗೆ ಹಾಕುತ್ತಿರುವ ಕಾರಣ ಬಡವರು ಬಳಲಿ ಹೋಗಿದ್ದಾರೆ. ಅಚ್ಚರಿಯ ವಿಷಯ ಎಂದರೆ ಇದು ಸರ್ಕಾರಿ ಜಮೀನು ಆಗಿದ್ದು, 25 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ ಸ್ಥಳೀಯರು. ಇಲ್ಲಿ 53 ಮನೆಗಳು ಇದ್ದು, ಸರ್ಕಾರದಿಂದಲೇ ಹಲವರಿಗೆ ಖಾತೆ ಆಗಿದೆ.
ಮೂರು ಲಕ್ಷ ಕೊಡುತ್ತೇನೆ ಮನೆ ಖಾಲಿ ಮಾಡಿ ಅಂತ ಬೆದರಿಕೆ ಹಾಕುತ್ತಿದ್ದಾರೆ. ನಾವು ಹೋಗಲ್ಲ ಎಂದುದಕ್ಕೆ ನಿಮ್ಮನ್ನ ಒದ್ದು ಕಳಿಸುತ್ತೇನೆ. ಯಾವ ಸರ್ಕಾರ, ಪೊಲೀಸ್ ಠಾಣೆಗೆ ಹೋದರೂ ನಿಮಗೆ ಸಹಾಯ ಮಾಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಉಮ್ರಾ ಗ್ರೂಪ್ ಆಫ್ ಕಂಪೆನಿ ಇಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ.