

ಬೆಂಗಳೂರು: ಜನರು, ಪಕ್ಷದ ಕಾರ್ಯಕರ್ತರ ಅಭಿಲಾಷೆಯಂತೆ ವಿಧಾನ ಮಂಡಲದ ಅಧಿವೇಶನದ ಬಳಿಕ ರಾಜ್ಯ ಪ್ರವಾಸ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಮ್ಮ ಜನ್ಮದಿನದ ನಿಮಿತ್ತ ಕಾವೇರಿ ನಿವಾಸದಲ್ಲಿ ಅಭಿಮಾನಿಗಳು ಭಾನುವಾರ ಆಯೋಜಿಸಿದ್ದ ಪಕ್ಷದ ರೈತ ಕಾರ್ಯಕರ್ತರ ಕುಟುಂಬಗಳಿಗೆ ಟ್ರ್ಯಾಕ್ಟರ್ ಉಚಿತವಾಗಿ ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪಕ್ಷದ ಸಂಘಟನೆ ಬಲಪಡಿಸಿ ಮತ್ತೊಮ್ಮೆ ಅಧಿಕಾರಕ್ಕೆ ತರುವುದು ತಮ್ಮ ಸಂಕಲ್ಪವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕೆಲಸಗಳು, ಅಭಿವೃದ್ಧಿ ಯೋಜನೆಗಳನ್ನು ಗಮನಿಸಿರುವ ಜನರು ಬಿಜೆಪಿಗೆ ಮತ್ತೆ ಆಶೀರ್ವದಿಸಿ ಬಹುಮತ ನೀಡುವ ವಿಶ್ವಾಸವಿದೆ. ಕಾಂಗ್ರೆಸ್ ನವರ ಯಾವುದೇ ಬೂಟಾಟಿಕೆ ನಡೆಯುವುದಿಲ್ಲ ಎಂದರು.
ಅಧಿಕಾರದಲ್ಲಿ ಇಲ್ಲದಿದ್ದರೂ ಮಠಾಧೀಶರು, ಬೆಂಬಲಿಗರು ಅಭಿಮಾನಿಗಳು, ಜನರು ಆಶೀರ್ವಾದ ಮಾಡಿ ಪ್ರೋತ್ಸಾಹಿಸಿದ್ದಾರೆ ಎಂದ ಬಿಎಸ್ ವೈ, ಉಕ್ರೇನ್ ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಜವಾಬ್ದಾರಿಯನ್ನು ಕೇಂದ್ರ, ರಾಜ್ಯ ಸರ್ಕಾರ ಹೊತ್ತುಕೊಂಡಿದ್ದು ಅತಂತ್ರರಾಗಿರುವವರು ಚಿಂತಿಸುವುದು ಬೇಡವೆಂದು ಅಭಯ ನೀಡಿದರು.
ಸಂಕಲ್ಪ ದಿನ
ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ 2023ರ ವಿಧಾನಸಭೆ ಚುನಾವಣೆಯನ್ನು ಬಿಎಸ್ ವೈ ಮಾರ್ಗದರ್ಶನದಲ್ಲಿ ಎದುರಿಸುವ ಸಂಕಲ್ಪ ದಿನವಾಗಿದೆ. ಏಕಾಂಗಿ ಹೋರಾಟ, ಕಷ್ಟಪಟ್ಟು ಪಕ್ಷವನ್ನು ಬೆಳೆಸಿ, ಇಡೀ ರಾಜ್ಯ ವ್ಯಾಪಿಸುವಂತೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.