

ಬೆಂಗಳೂರು: ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಕಾಂಗ್ರೆಸ್ನ ಹಿರಿಯ ಮುಖಂಡ, ಹಿಂದುಳಿದ ವರ್ಗಮುಖಂಡ ಬಿ.ಕೆ.ಹರಿಪ್ರಸಾದ್ ಅವರಿಗೆ ಒಲಿದಿದೆ.
ಎಐಪಿಸಿ ಬುಧವಾರ ಈ ಘೋಷಣೆ ಮಾಡಿದ್ದು, ಇವರೊಂದಿಗೆ ಪ್ರಕಾಶ್ ರಾಥೋಡ್ ಅವರಿಗೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಕೆ.ಗೋವಿಂದ ರಾಜ್ ಅವರಿಗೆ ವಿಧಾನಪರಿಷತ್ನಲ್ಲಿ ಪಕ್ಷದ ಉಪ ನಾಯಕನನ್ನಾಗಿ ನೇಮಕ ಮಾಡಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ಎಸ್.ಆರ್.ಪಾಟೀಲ್ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಒಲಿದಿತ್ತು. ಆದರೆ, ಜನವರಿ 5ರಂದು ಅವರ ವಿಧಾನಪರಿಷತ್ ಸದಸ್ಯತ್ವದ ಅವಧಿ ಮುಕ್ತಾಯವಾಗಿತ್ತು. ಈ ಮುನ್ನ ನಡೆದಿದ್ದ ಚುನಾವಣೆಯಲ್ಲಿ ಮರುಸ್ಪರ್ಧೆಗೆ ಪಕ್ಷ ಅವಕಾಶ ಕೊಟ್ಟಿರಲಿಲ್ಲ. ಈ ಮೂಲಕ ಹೊಸ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಾಗಿತ್ತು.
67ರ ಹರೆಯದ ಬಿ.ಕೆ.ಹರಿಪ್ರಸಾದ್ ಬಿಕಾಂ ಪದವೀಧರರಾಗಿದ್ದಾರೆ. ಎನ್ಎಸ್ಯುಐ, ಸೇವಾದಳ, ಯುವ ಕಾಂಗ್ರೆಸ್ ಮೂಲಕ ಪಕ್ಷದಲ್ಲಿ ತೊಡಗಿಕೊಂಡು ರಾಜ್ಯಸಭಾ ಸದಸ್ಯರೂ ಆಗಿದ್ದರು. ಹೈಕಮಾಂಡ್ ಜತೆ ನಿಕಟ ಸಂಪರ್ಕಹೊಂದಿ ದೀರ್ಘಕಾಲ ದೆಹಲಿ ಮಟ್ಟದಲ್ಲಿ ಪ್ರಭಾವಿ ಎನಿಸಿಕೊಂಡಿದ್ದರು. ಬೆಂಗಳೂರು ದಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯಥಿರ್ಯಾಗಿ ಸೋಲುಂಡಿದ್ದರು. ಈ ನಡುವೆ ಪಕ್ಷ ಇವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ನೆಲೆ ಕಲ್ಪಿಸಿತು. ಇದೀಗ ವಿರೋಧ ಪಕ್ಷದ ನಾಯಕ ಸ್ಥಾನ ಒಲಿದುಬಂದಿದೆ.
ರಾಜಕೀಯ ಲೆಕ್ಕಾಚಾರ
ಹೇಗಿದ್ದರೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಕಾಂಗ್ರೆಸ್ಗೆ ಖಾತ್ರಿಯಾಗಿದೆ, ಉಪ ಚುನಾವಣೆಯ ಕೆಲವು ತಾಜಾ ಉದಾಹರಣೆಯೂ ಎದುರಿಗಿದೆ. ಹೀಗಾಗಿ ಒಬಿಸಿ ವರ್ಗವನ್ನು ಓಲೈಸಿಕೊಳ್ಳಲು ಬಿ.ಕೆ.ಹರಿಪ್ರಸಾದ್ಗೆ ಮಣೆಹಾಕಿದೆ. ಎರಡು ದಿನದ ಹಿಂದಷ್ಟೇ ಲಿಂಗಾಯತ ಸಮುದಾಯದ ಗಮನ ಸೆಳೆಯಲು ಶಾಸಕ ಎಂ.ಬಿ.ಪಾಟೀಲ್ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿತ್ತು.
ಮುಂಬರುವ ಚುನಾವಣೆ ದೃಷ್ಟಿಯಿಂದ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲು ಪಕ್ಷ ಪ್ರಯತ್ನ ಮಾಡುತ್ತಿದ್ದು, ಬಿ.ಕೆ.ಹರಿಪ್ರಸಾದ್ ಆಯ್ಕೆ ಹಿಂದೆಯೂ ಇದೆ ಲೆಕ್ಕಾಚಾರ ಅಡಗಿದಂತೆ ಕಾಣಿಸುತ್ತಿದೆ.
ಹರಿಪ್ರಸಾದ್ ಹಿರಿಮೆ:
ಇಬ್ರಾಹಿಂಗೆ ನಿರಾಸೆ:
ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನದ ಮೇಲೆ ಕೆ.ಸಿ.ಕೊಂಡಯ್ಯ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಾದರೂ, ಪರಿಷತ್ ಚುನಾವಣೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ಹರಿಪ್ರಸಾದ್ ದಾರಿ ಸಲೀಸಾಗಿತ್ತು. ಸಿ.ಎಂ.ಇಬ್ರಾಹಿಂ ಪ್ರಬಲ ಪೈಪೋಟಿ ನೀಡಿದ್ದರು. ಈ ಸ್ಥಾನ ಸಿಕ್ಕರಷ್ಟೇ ಕಾಂಗ್ರೆಸ್ನಲ್ಲಿ ಮುಂದುವರಿಯುವುದಾಗಿ ಹೇಳಿಕೊಂಡು ಜೆಡಿಎಸ್ ಸಂಪರ್ಕವನ್ನೂ ಸಾಧಿಸಿದ್ದರು.
ಕಾಂಗ್ರೆಸ್ನಲ್ಲಿ ಸಿ.ಎಂ.ಇಬ್ರಾಹಿಂಗೆ ಪ್ರತಿಪಕ್ಷ ನಾಯಕ ಸ್ಥಾನ ಕೊಡುವ ವಿಷಯದಲ್ಲಿ ಒಮ್ಮತ ಕಾಣಿಸಲಿಲ್ಲ. ಒಂದು ಬಣ ದೆಹಲಿಗೆ ತೆರಳಿ ಲಾಬಿ ಮಾಡಿತ್ತು. ಆದರೂ ಹೈಕಮಾಂಡ್ ಹರಿಪ್ರಸಾದ್ಗೆ ಅವಕಾಶ ಮಾಡಿಕೊಟ್ಟಿದೆ. ಸಹಜವಾಗಿ ಸಿ.ಎಂ.ಇಬ್ರಾಹಿಂಗೆ ನಿರಾಸೆಯಾಗಿದೆ.