ಬಿಜೆಪಿ ಜನಬಲ ಪ್ರದರ್ಶನಕ್ಕೆ ದೊಡ್ಡಬಳ್ಳಾಪುರದಲ್ಲಿ ವೇದಿಕೆ ಸಜ್ಜು: ಸಿಎಂ ಬೊಮ್ಮಾಯಿ‌, ಸ್ಮೃತಿ ಇರಾನಿ ಭಾಗಿ

BJP
Published on

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ತಮ್ಮಶೆಟ್ಟಿ‌ ಬಳಿ ಜನಸ್ಪಂದನ ಸಮಾವೇಶಕ್ಕೆ ಬೃಹತ್ ವೇದಿಕೆ, ದೊಡ್ಡ ಸಭಾಮಂಟಪ ಸಜ್ಜಾಗಿದ್ದು,‌ ಶನಿವಾರ ನಡೆಯಲಿರುವ ಸಮಾವೇಶದಲ್ಲಿ ಬಿಜೆಪಿ ಜನಬಲ ಪ್ರದರ್ಶನವಾಗಲಿದೆ ಎಂದು ಕಾರ್ಯಕ್ರಮದ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕಾರ್ಯಕ್ರಮದ ಸ್ಥಳದಲ್ಲಿ ಸಿದ್ಧತೆಗಳನ್ನು ಶುಕ್ರವಾರ ವೀಕ್ಷಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳು ಹಾಗೂ ಕಾರ್ಯಕರ್ತರು ಸೇರಿ ಆಚರಿಸುತ್ತಿರುವ ಉತ್ಸವ ಇದಾಗಿದ್ದು, ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆ‌ ಜನರ ಮುಂದಿಡುವ ಜತೆಗೆ ಮುಂದಿನ ನಡೆಯ‌ ಬಗ್ಗೆಯೂ ಘೋಷಣೆಯಾಗಲಿದೆ.

ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಭಾಗಶಃ ತುಮಕೂರು ಮತ್ತು ಬೆಂಗಳೂರು ನಗರ ಜಿಲ್ಲೆಯ ಜನರು ಭಾಗವಹಿಸಲಿದ್ದು, ಈ ಭಾಗದಲ್ಲಿ ಪಕ್ಷಕ್ಕೆ ‌ಬಲವಿಲ್ಲ ಎಂದು ಟೀಕಿಸುವವರಿಗೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂದು ಡಾ.ಸುಧಾಕರ್ ಹೇಳಿದರು. ಸಚಿವ ಎಂಟಿಬಿ‌ ನಾಗರಾಜ್, ಪಕ್ಷದ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net