'ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ವಿದ್ಯೆಗೆ ಸರಸ್ವತಿ, ಆದ್ರೆ ಕಾಂಗ್ರೆಸ್​ನಲ್ಲಿ ಬೇನಾಮಿ ಅಧ್ಯಕ್ಷೆ 'ಲಕ್ಷ್ಮಿ'ಗೆ ಮಾತ್ರ ಗೌರವ...'

dkshi
Published on

ಬೆಂಗಳೂರು: ವಿಧಾನ ಪರಿಷತ್​ಗೆ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ಖುದ್ದು ಕಾಂಗ್ರೆಸ್​ ವಲಯದಲ್ಲಿಯೇ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಒಬ್ಬರೇ ಒಬ್ಬರು ಮಹಿಳೆಗೆ ಸ್ಥಾನ ಕೊಟ್ಟಿಲ್ಲ ಎನ್ನುವುದು ಹಲವರ ಆಕ್ರೋಶಕ್ಕೂ ಕಾರಣವಾಗಿದೆ. ಇದನ್ನೇ ಇಟ್ಟುಕೊಂಡು ಇದೀಗ ಬಿಜೆಪಿ ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿ ಟ್ವೀಟ್​ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಣಕ್ಕೆ ಮಹಿಳಾ ಸಬಲೀಕರಣ ಅಂದ್ರೆ ಬೆಳಗಾವಿಯ ಬೇನಾಮಿ ಅಧ್ಯಕ್ಷೆ ಮಾತ್ರ. ಲಕ್ಷ್ಮಿ ಜಪ ಮಾಡುವುದೇ ಮಹಿಳಾ ಸಬಲೀಕರಣವೇ? ಎಂದು ಟ್ವೀಟ್​ನಲ್ಲಿ ಪ್ರಶ್ನಿಸಲಾಗಿದೆ. ಧೈರ್ಯಕ್ಕೆ ದುರ್ಗೆ, ಶಕ್ತಿಗೆ ಪಾರ್ವತಿ, ಸಹನೆಗೆ ಸೀತೆ, ವಿದ್ಯೆಗೆ ಸರಸ್ವತಿ ಎಂದು ಸ್ತ್ರೀಯರಿಗೆ ಗೌರವ ಕೊಡುವ ಸಂಸ್ಕೃತಿ ನಮ್ಮದು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಬೆಳಗಾವಿಯ 'ಲಕ್ಷ್ಮಿ'ಗೆ ಮಾತ್ರ ಗೌರವ. ಇದು ಮಹಿಳಾ ಸಬಲೀಕರಣ ವಿಚಾರಕ್ಕೆ ಕಾಂಗ್ರೆಸ್ ಮಾಡುತ್ತಿರುವ ಅವಮಾನವಲ್ಲದೆ ಮತ್ತೇನು? ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಅವರನ್ನು ಉದ್ದೇಶಿಸಿ ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕಾರ್ಯಾಧ್ಯಕ್ಷರಲ್ಲೂ ಮಹಿಳೆಯರಿಗೆ ಸ್ಥಾನವಿಲ್ಲ, ಪರಿಷತ್ ಚುನಾವಣೆಗೂ ಮಹಿಳಾ ಅಭ್ಯರ್ಥಿ ಇಲ್ಲ. ಮಹಿಳಾ ಸಬಲೀಕರಣ ಬರೀ ಬೂಟಾಟಿಕೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ಉತ್ತರಪ್ರದೇಶ - ಮೈ ಲಡ್ಕಿ ಹೂ, ಮೈ ಲಡ್ ಸಕ್ತಿ ಹೂ. ಆದರೆ, ಕರ್ನಾಟಕದಲ್ಲಿ ಮಹಿಳಾ ಸಬಲೀಕರಣ ಬಗ್ಗೆ ಉದ್ದುದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಯನ್ನು ಪರಿಷತ್ತಿಗೆ ಆಯ್ಕೆ ಮಾಡಿಲ್ಲ. ಮಹಿಳಾ ಸಬಲೀಕರಣ ಬರೀ ಭಾಷಣಕ್ಕೆ ಸೀಮಿತವೇ? ಎಂದು ಪ್ರಶ್ನಿಸಿರುವ ಬಿಜೆಪಿ, ಕಲ್ಯಾಣ ಕರ್ನಾಟಕ ಭಾಗವಾದ ಕೊಪ್ಪಳ ಜಿಲ್ಲೆಯಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದ ಹೇಮಲತಾ ನಾಯಕ್ ಅವರನ್ನು ಬಿಜೆಪಿ ಗುರುತಿಸಿದೆ. ತಳಮಟ್ಟದ ಕಾರ್ಯಕರ್ತರನ್ನು ನಮ್ಮ ಪಕ್ಷ ಮುಂಚೂಣಿಯಲ್ಲಿ ನಿಲ್ಲಿಸಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವುದು ನಮಗೆ ಕೇವಲ ಬಾಯಿ ಮಾತಿನ ಘೋಷಣೆಯಲ್ಲ ಎಂದಿದೆ.

ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹೊಂದಿರುವ ನಾಯಕಿಯೇ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗಾದರೆ, ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಮಹಿಳಾ ಕಾರ್ಯಕರ್ತರ ಪಾಡೇನು? ಎಂದು ಟೀಕಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net