

ಬೆಂಗಳೂರು: ನೀವು ಅಧಿಕಾರದಲ್ಲಿ ಇದ್ದಾಗ ಬಿಟ್ ಕಾಯಿನ್ ಬೆಳೆಯಲು ಬಿಟ್ಟಿದ್ದು ಸರಿಯಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಕಾಂಗ್ರೆಸ್‌ಗೆ ಪ್ರಶ್ನೆಗಳ ಸುರಿಮಳೆ ಹಾಕಿ ಪೇಚಿಗೆ ಸಿಲುಕಿಸಿದರು.
ಬಿಟ್ ಕಾಯಿನ್‌ಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಮಾಡಿದಂತಹ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದನ್ನು ಹಿಡಿದವರೇ ನಾವು. ನಾವು ಬಹಳ ಮುಕ್ತವಾಗಿ ಇದ್ದೇವೆ. ಯಾರೇ ಇದರಲ್ಲಿ ಶಾಮೀಲಾಗಿದ್ದರೂ ಬಿಡುವುದಿಲ್ಲ ಎಂದರು.
ಭಾರತದ ಅತಿದೊಡ್ಡ ಬಿಟ್‌ಕಾಯಿನ್ ಹಗರಣವನ್ನು ಕರ್ನಾಟಕ ಬಿಜೆಪಿ ಸರ್ಕಾರವು ನ್ಯಾಯಯುತ ತನಿಖೆ ನಡೆಸುವ ಬದಲು ಆಪರೇಷನ್ ಬಿಟ್‌ಕಾಯಿನ್ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಹಗರಣದ ತನಿಖೆಯನ್ನು ಕೈಬಿಡಲು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳುವ ಮೂಲಕ ತನಿಖೆಯನ್ನು ಕೈಬಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸುರ್ಜೆವಾಲಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ‘ಇಬ್ಬರು ಪ್ರಭಾವಿ ಅಂತೀರಾ, ಅವರ ಹೆಸರು ಹೇಳಿ ಎಂದು ಸವಾಲು ಹಾಕಿದರು. ಬಿಟ್ ಕಾಯಿನ್ ಪ್ರಕರಣ 2016ರಿಂದ ಪ್ರಕರಣ ಇದೆ ಎನ್ನುತ್ತಾರೆ. ಅವರ ಸರ್ಕಾರ ಇತ್ತು. ಆಗ ಸುರ್ಜೇವಾಲ ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಕೇಳಲಿ’ ಎಂದು ಟಾಂಗ್ ಕೊಟ್ಟರು. 2016 ರಿಂದ ಪ್ರಕರಣ ಇದೆ ಎನ್ನುತ್ತಾರೆ. ಆಗಿನಿಂದಲೂ ಇದ್ದ ಮೇಲೆ ಕಾಂಗ್ರೆಸ್ ಯಾಕೆ ಅದರ ಮೇಲೆ ಗಮನ ಹರಿಸಲಿಲ್ಲ..? 2018 ರಲ್ಲಿ ಶ್ರೀಕಿ ಬಂಧಿಸಿ, ನಂತರ ಬಿಟ್ಟದ್ದು ಏಕೆ? 2018 ರಲ್ಲಿ ಕಾಂಗ್ರೆಸ್ ಶ್ರೀಕಿಯನ್ನು ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತು. ಆತನ ವಿಚಾರಣೆಯನ್ನೇ ಕಾಂಗ್ರೆಸ್ ಮಾಡಲಿಲ್ಲ. ನಾವು ಆತನನ್ನು ಹಿಡಿದಿದ್ದು ಡ್ರಗ್ ಕೇಸ್ ನಲ್ಲಿ. ನೀವು ಎಲ್ಲವನ್ನೂ ಮುಕ್ತವಾಗಿ ಬಿಟ್ಟು ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾಗಿದ್ದೀರಿ ಎಂದು ಆರೋಪಿಸಿದರು.
ಅಂದು ಶ್ರೀಕಿ ಬಂಧನ ಮಾಡಿದಾಗ ಅಂದೇ ಪ್ರಕರಣ ತನಿಖೆ ಮಾಡಬೇಕಿತ್ತು. ಆದರೆ ಅವನನ್ನ ಬಿಟ್ಟರು. ನೀವು ಅಧಿಕಾರದಲ್ಲಿದ್ದಾಗ ಬಿಟ್ಟು, ದೊಡ್ಡ ಪ್ರಮಾಣದಲ್ಲಿ ಆದಾಗ ನಮ್ಮನ್ನ ಪ್ರಶ್ನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಈಗ ಅಷ್ಟು ಕೋಟಿ, ಇಷ್ಟು ಕೋಟಿ ಬಿಟ್ ಕಾಯಿನ್ ಇದೆ ಅಂತ ಹೇಳುತ್ತಿದ್ದಾರೆ. ಒಂದು ಟ್ವೀಟ್ ಆಧಾರದ ಮೇಲೆ ವಿಚಾರಣೆ ಮಾಡ್ತೀರಾ...? ಎಂದು ಪ್ರಶ್ನಿಸಿದ ಸಿಎಂ, ಟ್ವೀಟ್ ಆಧಾರದ ಮೇಲೆ ರಾಷ್ಟ್ರೀಯ ವಕ್ತಾರ ಹೇಳಿಕೆ ನೀಡೋದು ಸರಿಯಲ್ಲ. ಪ್ರಕರಣ ತನಿಖೆ ಮಾಡುತ್ತಿರುವುದು ನಾವು. ಇದರ ಹಿಂದೆ ಯಾರೇ ಇದ್ದರೂ ಅವರನ್ನ ಬಲಿ ಹಾಕ್ತೀವಿ ಎಂದು ಗಟ್ಟಿದನಿಯಲ್ಲಿ ಹೇಳಿದರು.
ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ನಾವು ಅವನನ್ನು ಬಂಧನ ಮಾಡಿದ್ದೇವೆ. ಬಿಟ್ಟವರಿಂದ ಬುದ್ದಿ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಆರೋಪಗಳಿಗೆ ಭಾವೋದ್ವೇಗದ ಮಾತುಗಳಲ್ಲಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ನಾವು ಆತನನ್ನು ಡ್ರಗ್ ಕೇಸ್ ನಲ್ಲಿ ಹಿಡಿದು ವಿಚಾರಣೆ ಮಾಡಿ ಎಲ್ಲ ಬಹಿರಂಗಗೊಳಿಸಿದರೆ ನಮಗೇ ಪ್ರಶ್ನೆ ಮಾಡ್ತೀರಾ..?? ಎಂದು ಏರು ದನಿಯಲ್ಲಿ ಪ್ರಶ್ನಿಸಿದರು. ಬಿಟ್ ಕಾಯಿನ್ ಪ್ರಕರಣ ಬಯಲಿಗೆ ತಂದಿದ್ದೇ ನಾವು. ಇದರ ತನಿಖೆ ಮಾಡಿದ್ದೇ ನಾವು.ಇಡಿ, ಸಿಬಿಐಗೆ ವಹಿಸಿದ್ದೇ ನಾವು. ಇದರ ತನಿಖೆ ಇಡಿ ಮಾಡುತ್ತಿದೆ. ಹಲವು ಮಾಹಿತಿ ಕೇಳಿದ್ದರು ಅದನ್ನೂ ಕೊಟ್ಡಿದ್ದೇವೆ. ನಾವೆ ಇದನ್ನು ಬಯಲುಗೊಳಿಸಿದ್ದು ಪುನರುಚ್ಛರಿಸಿದರು. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ರೂ ಬಿಡಲ್ಲ, ಬಲಿ ಹಾಕುತ್ತೇವೆ. ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನವರು ತಮ್ಮದನ್ನು ಮುಚ್ಚಿಕೊಳ್ಳಲು ಹಿಂದೆಮುಂದೆ ಇಲ್ಲದವರ ಹೆಸರು ಹೇಳುತ್ತಿದ್ದಾರೆ. ಪ್ರಕರಣದಲ್ಲಿ ಇಲ್ಲದವರ ಮೇಲೆ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ದೂರಿದರು.
ನಮಗೆ ಈ ಪ್ರಕರಣದಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ, ಕೆಲವು ವ್ಯಕ್ತಿಗಳಿಗೆ ಮೋಸವಾಗಿದ್ದರೆ, ಮೋಸ ಮಾಡಿದವರ ವಿರುದ್ಧ ಮುಖ ಮುಲಾಜಿಲ್ಲದೇ ಕ್ರಮ ಜರುಗಿಸುತ್ತೇವೆ. ನಾವೇ ಶ್ರೀಕಿ ಬಂಧನ ಮಾಡಿದ್ದು, ನಾವೇ ಆತನ ಮೇಲೆ ಎಫ್ ಐಆರ್ ಹಾಕಿದ್ದು ನಾವೇ ಎಂದು ಹೇಳಿದರು.
ಪೊಲೀಸರಿಗೆ ಶ್ರೀಕಿ ತನ್ನ ಅಕೌಂಟ್ ಅಂತ ಯವುದೋ ಎಕ್ಸೇಂಜ್ ಅಕೌಂಟ್ ತೋರಿಸಿದ್ದಾನೆ. ಎಕ್ಸೇಂಜ್ ಅಕೌಂಟ್ ತೋರಿಸಿ ನನ್ನ ಅಕೌಂಟ್ ಎಂದು ಹೇಳಿದ್ದಾನೆ. ಯಾರಿಗೂ ವೈಯಕ್ತಿಕವಾಗಿ ಎಕ್ಸೇಂಜ್ ಅಕೌಂಟ್ ಇರಲ್ಲ. ಇಷ್ಟೇ ಆಗಿರೋದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.