

ಬೆಳಗಾವಿ: ಕರೊನಾ ಎರಡನೆಯ ಅಲೆ ಭೀಕರ ರೂಪ ತಳೆಯುತ್ತಿರುವ ನಡುವೆಯೇ ಬ್ಲ್ಯಾಕ್ ಫಂಗಸ್ ಜನರ ನಿದ್ದೆಗೆಡಿಸಿದೆ. ಇದರ ಮಧ್ಯೆಯೇ ಈಗ ವೈಟ್ ಫಂಗಸ್ ಮಹಾಮಾರಿ ಕಾಲಿಟ್ಟುಬಿಟ್ಟಿದೆ.
ಬೆಳಗಾವಿಯ ಇಬ್ಬರು ಕರೊನಾ ಸೋಂಕಿತರಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿದೆ. ಈ ಕುರಿತು ಮಾಹಿತಿ ಮಾಡಿರುವ ಡಿಹೆಚ್‌ಒ ಡಾ.ಎಸ್.ವಿ.ಮುನ್ಯಾಳ್, ಇದಾಗಲೇ ಬ್ಲ್ಯಾಕ್ ಫಂಗಸ್ ನಿದ್ದೆಗೆಡಿಸಿದೆ. ಇದರ ನಡುವೆ ಇಬ್ಬರು ವೈಟ್ ಫಂಗಸ್ ಕೂಡ ಪತ್ತೆಯಾಗಿದ್ದು, ಇದರ ಫಲಿತಾಂಶ ಬಂದ ಮೇಲೆ ನಿಖರವಾಗಿ ತಿಳಿಯಲಿದೆ. ಸದ್ಯ ಮಾದರಿಗಳನ್ನು ಬಯಾಪ್ಸಿ, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಟೆಸ್ಟ್‌ಗೆ ಕಳಿಸಿದ್ದೇವೆ ಎಂದಿದ್ದಾರೆ.
ಇದಾಗಲೇ ಬೆಳಗಾವಿಯಲ್ಲಿ 9 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ‘ಕೋವಿಡ್ ಚಿಕಿತ್ಸೆ ಉಪಚಾರದ ಅಡ್ಡ ಪರಿಣಾಮಗಳಲ್ಲಿ ಬ್ಲ್ಯಾಕ್ ಫಂಗಸ್ ಒಂದು. ಆಕ್ಸಿಜನ್ ಪೈಪ್, ಮಾಸ್ಕ್, ನೀರು ಕಾಲಕಾಲಕ್ಕೆ ಬದಲಾವಣೆ ಮಾಡಬೇಕು, ನಾವು ಬಳಸುವ ಮಾಸ್ಕ್ ಶುಚಿಯಾಗಿರಬೇಕು, ಪ್ರತಿದಿನ ಶುಚಿಗೊಳಿಸಿ, ಐರನ್ ಮಾಡಿ ಬಳಸುವುದು ಉತ್ತಮ ಎಂದು ಡಾ. ಮುನ್ಯಾಳ್ ಹೇಳಿದ್ದಾರೆ.
ಒಂದೇ ಮಾಸ್ಕ್ ಎರಡ್ಮೂರು ದಿನ ಬಳಸಿದ್ರೆ ಅದೂ ಫಂಗಸ್‌ಗೆ ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಸಹ ಪತ್ತೆಯಾಗುತ್ತಿದೆ. ಗೋಕಾಕ್, ಅಥಣಿಯ ಇಬ್ಬರು ಬ್ಲ್ಯಾಕ್ ಫಂಗಸ್‌ನಿಂದ ಮೃತಪಟ್ಟಿದ್ದಾರೆ. ಉಳಿದ 7 ರೋಗಿಗಳಿಗೆ ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.