ಸಿಯಾಚಿನ್ ಕಣಿವೆಯಲ್ಲಿ ಬೆಳಗಾವಿಯ ಯೋಧ ಹುತಾತ್ಮ: ಅಂತಿಮ ನಮನ ಸಲ್ಲಿಸಿದ ಗಣ್ಯರು

soldier
Published on

ಬೆಳಗಾವಿ: ಸಿಯಾಚಿನ್ ಗ್ಲೇಷಿಯರ್ ನಲ್ಲಿ ನಡೆಯುತ್ತಿದ್ದ ಆಪರೇಷನ್ ಮೇಘದೂತ ಕಾರ್ಯಾಚರಣೆ ಸಂದರ್ಭದಲ್ಲಿ ಸಾವನ್ನಪ್ಪಿದ ಮರಾಠಾ ಲಘು ಪದಾತಿದಳದ ಯೋಧ ಕೊಲ್ಲಾಪುರ ಜಿಲ್ಲೆಯ ಜಾಧವ ಪ್ರಶಾಂತ ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಅನೇಕ ಗಣ್ಯರು ಅಂತಿಮನಮನ ಸಲ್ಲಿಸಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಸಕಲ ಸರಕಾರಿ ಗೌರವ ಸಲ್ಲಿಸಲಾಯಿತು.

ಅಂತಿಮ ನಮನ ಸಲ್ಲಿಸಿದ ಬಳಿಕ ಯೋಧನ ಪಾರ್ಥಿವ ಶರೀರವನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆ ಗಡಹಿಂಗ್ಲಜ್ ತಾಲ್ಲೂಕಿನ ಬಸರಗಿ ಬಿ.ಕೆ. ಗ್ರಾಮಕ್ಕೆ ರಸ್ತೆ ಮೂಲಕ ಕಳಿಸಿಕೊಡಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಡಿಸಿಪಿ ರವೀಂದ್ರ ಗಡಾದಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಮರಾಠಾ ಲಘುಪದಾತಿ ದಳದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net