ವಿಶ್ವದರ್ಜೆಗೇರಲಿದೆ ಬೆಂಗಳೂರು: ಕೆಂಪೇಗೌಡ ಜಯಂತಿಯಂದು ಯಡಿಯೂರಪ್ಪ ವಾಗ್ದಾನ

BSY
Published on

ಬೆಂಗಳೂರು: ಜಾಗತಿಕ ನಕ್ಷೆಯಲ್ಲಿ ಗುರುತರ ಸ್ಥಾನ ಗಳಿಸಿಕೊಂಡಿರುವ ಬೆಂಗಳೂರು ಮಹಾನಗರವನ್ನು ವಿಶ್ವದರ್ಜೆಗೇರಿಸುವ ಸಂಕಲ್ಪವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾನ ನೀಡಿದರು.
ವಿಧಾನ ಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಉದ್ಘಾಟನೆ, ಕೆಂಪೇಗೌಡ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಚಾಲನೆ, ಕೆಂಪೇಗೌಡರ ಭಾವಚಿತ್ರವುಳ್ಳ ಅಂಚೆ ಚೀಟಿ ಮತ್ತು ಲಕೋಟೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಹತ್ತಾರು ಸಾವಿರ ಕೋಟಿ ರೂ ಮೊತ್ತದ ಬೆಂಗಳೂರು ಉಪ ನಗರ ರೈಲು ಯೋಜನೆ, ಮೆಟ್ರೋ ವಿಸ್ತರಣೆ ಮುಂತಾದ ಯೋಜನೆಗಳನ್ನು ಮಂಜೂರು ಮಾಡಿ, ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಬಲ ತುಂಬಿದ್ದಾರೆ ಎಂದರು.

ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಅಗಾಧವಾಗಿ ಬೆಳವಣಿಗೆ ಸಾಧಿಸಿದೆ. ಅಂತಹ ಮಹಾನ್ ನಾಯಕನ ಆಶಯದಂತೆ ಬೆಂಗಳೂರು ಮಿಷನ್- 2022ರಡಿ ಜನಜೀವನ ಆಮೂಲಾಗ್ರ ಸುಧಾರಣೆಗೂ ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕೆಂಪೇಗೌಡರ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಲು ಸಲಹೆ ನೀಡಿದರೆ, ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಎಲ್ ಕೆಜಿಯಿಂದ ಸ್ನಾತಕೋತ್ತರ ವ್ಯಾಸಂಗದಲ್ಲಿ ಕೆಂಪೇಗೌಡರ ಕುರಿತು ಪಠ್ಯ, ನಮ್ಮ ಮೆಟ್ರೋಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡಬೇಕು ಎಂಬ ಬೇಡಿಕೆ ಮಂಡಿಸಿದರು.

ಸಿದ್ದಗಂಗಾ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿ ಮಾತನಾಡಿ, ಬೆಂಗಳೂರು ಬೆಳವಣಿಗೆಗೆ ಕೆಂಪೇಗೌಡರು ಭದ್ರ ಬುನಾದಿ ಹಾಕಿದರು. ಅವರ ದೂರದೃಷ್ಟಿಯ ಕ್ರಮಗಳು, ಮಾನವ ಕಲ್ಯಾಣ ಗುಣಗಳು ಅನುಕರಣೀಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net