

ಬೆಂಗಳೂರು: 50 ಮಂದಿ ಕೂರಬಹುದಾದ ಕಾನ್ಫರೆನ್ಸ್ ಹಾಲ್, ಕೊಠಡಿಯಲ್ಲಿ ಪ್ರಾಜೆಕ್ಟರ್‌ಗಳು, ಏರ್ ಕಂಡೀಷನ್, ಸುಸಜ್ಜಿತ ಆಸನಗಳು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸುತ್ತಲೂ ಪರಿಸರಕ್ಕೆ ಹತ್ತಿರವಾಗಿರುವ ಗಾರ್ಡನ್‌ಗಳು...ಇದು ಉತ್ತರ ವಿಭಾಗದ ಗಂಗಮ್ಮನಗುಡಿಯ ನೂತನ ಪೊಲೀಸ್ ಠಾಣೆಯ ದೃಶ್ಯ...
ನೂತನವಾಗಿ ನಿಮಾಣಗೊಂಡಿರುವ ಗಂಗಮ್ಮನಗುಡಿ ಪೊಲೀಸ್ ಠಾಣೆಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಬುಧವಾರ ಉದ್ಘಾಟಿಸಿದ್ದಾರೆ.
ಠಾಣೆಯ ಒಳಾಂಗಣದಲ್ಲಿ 50 ಮಂದಿ ಕೂರಬಹುದಾದ ವಿಶಾಲವಾದ ಕಾನ್ಫರೆನ್ಸ್ ಹಾಲ್ ನಿರ್ಮಿಸಲಾಗಿದೆ. 2 ಗುಣಮಟ್ಟದ ಪ್ರಾಜೆಕ್ಟರ್‌ಗಳನ್ನು ಅಳಡಿಸಲಾಗಿದೆ. ಪ್ರಕರಣದ ತನಿಖೆ ಬಗ್ಗೆ ಸಿಬ್ಬಂದಿಯೊಂದಿಗೆ ಚರ್ಚಿಸಲು ಇದು ಸಹಕಾರಿಯಾಗಿದೆ. ಸಿಬ್ಬಂದಿ ಹಾಗೂ ಠಾಣೆಗೆ ಬರುವ ಸಿಬ್ಬಂದಿಗೆ ಆರಾಮದಾಯಕವಾಗಿರಲು ಠಾಣೆಯೊಳಗೆ ಏರ್ ಕಂಡೀಶನ್, ಐಶಾರಾಮಿ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸುಸಜ್ಜಿತವಾದ ಪೀಠೋಪಕರಣದ ಜತೆಗೆ ಸಾರ್ವಜನಿಕರಿಗೆ ಕೂರಲು ಪ್ರತ್ಯೇಕ ಜಾಗವಿದೆ. ಶಿಚಿತ್ವದಿಂದ ಕೂಡಿದ ಶೌಚಗೃಹ ನಿರ್ಮಿಸಲಾಗಿದೆ ಎಂದು ಠಾಣಾಧಿಕಾರಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಠಾಣೆಯ ಮುಂದೆ ಗಾರ್ಡನ್:
ಠಾಣೆಯ ಹೊರಾಂಗಣದಲ್ಲಿ ಪೊಲೀಸ್ ವಾಹನ ನಿಲುಗಡೆ ಮಾಡಲು ವಿಶಾಲವಾದ ಪ್ರಾಂಗಣ, ಪರಿಸರಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಗಾರ್ಡನ್ ನಿರ್ಮಿಸಲಾಗಿದೆ. ಗಾರ್ಡನ್‌ನಲ್ಲಿ ವಿವಿಧ ಜಾತಿಯ ಆಕರ್ಷಕ ಹೂವಿನ ಗಿಡಗಳನ್ನು ನೆಡಲಾಗಿದೆ. ಬಿಡುವಿನ ವೇಳೆ ಸಿಬ್ಬಂದಿಗೆ ಆಡಲು ಶೆಟ್ಲ್‌ಕಾಕ್ ಕೋರ್ಟ್ ನಿರ್ಮಾಣ ಮಾಡಲಾಗಿದೆ. ಜತೆಗೆ ಠಾಣೆಯ ಸಮೀಪದಲ್ಲಿ ಸಣ್ಣದಾದ ದೇವಾಲಯವಿದೆ. ಠಾಣೆಯ ಸುತ್ತಲಿನ ಕಂಪೌಂಡ್ ಗೋಡೆಗಳು ವಿವಿಧ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ. ಒಟ್ಟಾರೆ ಠಾಣೆಯಲ್ಲಿ ಸ್ವಚ್ಚತೆ ಜತೆಗೆ, ಅಂದಕ್ಕೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಬೆಂಗಳೂರಿನಲ್ಲಿರುವ ಇತರ ಪೊಲೀಸ್ ಠಾಣೆಗಳಿಗೆ ಮಾದರಿಯಾಗಿದೆ.
ಏನಿದು ಸುಬಾಹು ಇ- ಬೀಟ್ ?
ಇದೇ ಸಂದರ್ಭದಲ್ಲಿ ಉತ್ತರ ವಿಭಾಗದಲ್ಲಿ ‘ಸುಬಾಹು ಇ- ಬೀಟ್’ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಈ ಹಿಂದೆ ಪೊಲೀಸರು ಗಸ್ತು ತಿರುಗುವುದನ್ನು ಬರಹದ ಮೂಲಕ ದಾಖಲಿಸಲಾಗುತ್ತಿತ್ತು. ಇನ್ನು ಮುಂದೆ ಸಿಬ್ಬಂದಿ ಸುಬಾಹು ಇ-ಬೀಟ್ ತಂತ್ರಾಶವನ್ನು ಸ್ಮಾರ್ಟ್‌ೆನ್‌ನಲ್ಲಿ ಅಳವಡಿಸಿಕೊಂಡು ಗಸ್ತು ತಿರುಗುವ ನಿರ್ದಿಷ್ಟ ಜಾಗಕ್ಕೆ ತೆರಳಿ ಕ್ಯೂ ಆರ್ ಕೋಡ್‌ನ್ನು ಸ್ಕಾೃನ್ ಮಾಡಬೇಕಿದೆ. ಗಸ್ತು ಸಿಬ್ಬಂದಿ ತಮ್ಮ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಿದ್ದಾರೆಯೇ ? ಇಲ್ಲವೇ ? ಎಂಬುದನ್ನು ಮೇಲಧಿಕಾರಿಗಳಿಗೆ ತಿಳಿಯಲು ‘ಸುಬಾಹು ಇ- ಬೀಟ್’ ಸಹಕಾರಿಯಾಗಿದೆ.