ಪಂಪ್​ಸೆಟ್​ ಉಳಿಸಿಕೊಳ್ಳಲು ಹೋಗಿ ಘಟಪ್ರಭಾದಲ್ಲಿ ಕೊಚ್ಚಿಹೋದ ರೈತ: ನೋಡಲಾಗುತ್ತಿಲ್ಲ ಕುಟುಂಬದವರ ಕಣ್ಣೀರು

bagalkote
Published on

ಬಾಗಲಕೋಟೆ: ಘಟಪ್ರಭಾ ನದಿಯಲ್ಲಿ ಪಂಪಸೆಟ್ ತರಲು ಹೋದ ರೈತನೊಬ್ಬ ಕೊಚ್ಚಿಹೋಗಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಚಿಕ್ಕ ಆಲಗುಂಡಿ ಗ್ರಾಮದ ಬಸವರಾಜ ಇರಕಣ್ಣವರ (38) ಕೊಚ್ಚಿಹೋಗಿದ್ದಾರೆ. ನದಿ ಮಧ್ಯದಲ್ಲಿ ಇದ್ದ ಪಂಪಸೆಟ್ ತೆಗೆಯಲು ಈಜಿಕೊಂಡು ಬಸವರಾಜ್ ಹೋಗಿದ್ದರು. 200 ಫೂಟ್ ವರೆಗೂ ಈಜಿದ್ದರು. ‌ನೀರು ವೇಗವಾಗಿ ಹರಿಯುತ್ತಿದ್ದರಿಂದ ಮುಂದಕ್ಕೆ ಹೋಗಲು ಆಗಲಿಲ್ಲ. ವಾಪಸ್​ ಕೂಡ ಅವರಿಗೆ ಬರಲು ಸಾಧ್ಯವಾಗಲಿಲ್ಲ. ದಡದಿಂದ ಹಗ್ಗ ಹಾಕಿ ಅವರನ್ನು ಎಳೆಯಲು ಮಾಡಿದ ಪ್ರಯತ್ನವೂ ಯಶಸ್ಬಿಯಾಗಿಲ್ಲ. ನಂತರ ಅವರು ಕೊಚ್ಚಿಕೊಂಡು ಹೋಗಿದ್ದಾರೆ.

2019ರಲ್ಲಿ ಪ್ರವಾಹ ಉಂಟಾಗಿ ವಿದ್ಯುತ್ ಮೋಟಾರ್ ಹಾಳಾಗಿದ್ದವು. ಈಗ ಮತ್ತೆ ಮಳೆಯಿಂದ ಅದು ಹಾಳಾಗಬಾರದು ಎನ್ನುವ ಕಾರಣಕ್ಕೆ ಬಸವರಾಜ ಅವರು ಅದನ್ನು ಕಾಪಾಡಿಕೊಳ್ಳಲು ಹೋಗಿದ್ದರು. ಈ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸುತ್ತಿದ್ದಾರೆ. ನದಿಯಲ್ಲಿ ನೀರಿನ ಹರಿವು 52 ಸಾವಿರ ಕ್ಯೂಸೆಕ್ ಇದೆ. ಇದರಿಂದಾಗಿ ನೀರು ವೇಗವಾಗಿ ಹರಿಯುತ್ತಿದ್ದು ಕಾರ್ಯಾಚರಣೆಗೂ ತೊಂದರೆಯಾಗುತ್ತಿದೆ. ನೀರಿನ‌ ಹರಿವು ಜಾಸ್ತಿ ಇದ್ದಿದ್ದರಿಂದ ಮುಂದಕ್ಕೆ ಹರಿದು ಹೋಗಿರಬೇಕು. ಆದ್ದರಿಂದ ಅವರು ಇದುವರೆಗೂ ಪತ್ತೆಯಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿ ಹೇಳುತ್ತಿದ್ದಾರೆ.

ಬಸವರಾಜ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸ್ವಂತ ಜಮೀನು ಇಲ್ಲದೇ ಲಾವಣಿ ಮಾಡಿಕೊಂಡಿದ್ದ ಮಗ, ದುಡಿವ ಯಜಮಾನನನ್ನು ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಪತ್ನಿ ತುಳಸವ್ವ, 11 ವರ್ಷದ ಮಗಳು ರೇಖಾ ಅವರ ಕಣ್ಣೀರು ನೋಡಲಾಗುತ್ತಿಲ್ಲ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net