

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆಯಾದರೂ, ಅದರ ಲಾಭ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ನಾಸ್ಕಾಂ ಸಹಯೋಗದಲ್ಲಿ ಅಯೋಜಿಸಿದ್ದ ‘‘ಹತ್ತನೇ ಆರೋಗ್ಯ ವಿಜ್ಞಾನ ಮತ್ತು ಆರೋಗ್ಯ ರಕ್ಷಣೆ ತಂತ್ರಜ್ಞಾನ ಆವಿಷ್ಕಾರ ಸಮಾವೇಶ ’ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದೇವೆ. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು ಎನ್ನುವುದು ತಂತ್ರಜ್ಞಾನ ಅಭಿವೃದ್ಧಿ ಉದ್ದೇಶವಾಗಿದೆ. ಆದರೆ ವಾಸ್ತವ ಹಾಗಿಲ್ಲ. ಸರಕಾರದ ಪ್ರಯತ್ನಗಳ ಹೊರತಾಗಿಯೂ, ಗ್ರಾಮೀಣ ಪ್ರದೇಶಗಳ ಜನರು ಗುಣಮಟ್ಟದ ಆರೋಗ್ಯ ಸೇವೆ ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಸೇವೆಗೆ ಮುಂದಾಗದ ವೈದ್ಯರು:
ರಾಜ್ಯದಲ್ಲಿ ಆರೋಗ್ಯ ವೃತ್ತಿಪರರ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವುದಕ್ಕಿಂತಲೂ ಹೆಚ್ಚಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ಸರ್ಕಾರ ಹತ್ತು ಸಾವಿರ ಕೋಟಿ ರೂ. ಅಧಿಕ ವ್ಯಯಿಸುತ್ತಿದೆ. ಆದರೆ ಮೂಲಸೌಕರ್ಯ ಮತ್ತು ತಂತ್ರಜ್ಞಾನದ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದಾಗುತ್ತಿಲ್ಲ. ಇದಕ್ಕೆ ತಂತ್ರಜ್ಞಾನ ಕಂಪೆನಿಗಳು ಪರಿಹಾರ ಸೂಚಿಸಬೇಕು ಎಂದು ಹೇಳಿದರು.
ನಾಸ್ಕಾಂ ಅಧ್ಯಕ್ಷೆ ದೇಬ್‌ಜಾನಿ ಘೋಷ್ ಮಾತನಾಡಿ, ಇಂದು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಆದರೆ ಅದೇ ಸಮಯಕ್ಕೆ ಜನರ ಮೂಲಭೂತ ಹಕ್ಕಾದ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ತಂತ್ರಜ್ಞಾನ ಆವಿಷ್ಕಾರಗಳ ಲಾಭ ಪಡೆದು ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತಾಗಬೇಕು ಎಂದರು.
ಸಮಾವೇಶದ ಆರಂಭದಲ್ಲಿ ಮಣಿಪಾಲ, ಮಂಗಳೂರು ಮತ್ತು ಹುಬ್ಬಳ್ಳಿಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನವೋದ್ಯಮಗಳ ಪ್ರತಿನಿಧಿಗಳು ತಮ್ಮ ಆವಿಷ್ಕಾರಗಳನ್ನು ಪರಿಚಯಿಸಿದರು. ಜಿಇ ಹೆಲ್ತ್‌ಕೇರ್‌ನ ಗಿರೀಶ್ ರಾಘವನ್, ಆಸ್ಟ್ರೇಜೆನಿಕ ಸಂಸ್ಥೆಯ ಅನಿಲ್ ಕುಕ್ರೆಜಾ, ಸಿ- ಬಾಕ್ಸ್ಟ್‌ರ್‌ನ ಸತೀಶ್, ಗಾವ್ಸ್ ಟೆಕ್‌ನ ಸುಮಿತ್ ಗಂಗೂಲಿ, ಸಿಮನ್ಸ್ ಹೆಲ್ತೀನಿಯರ್ಸ್‌ನ ಶಿಖಾ ಪಿಳ್ಳೈ ಇತರರು ಸಂವಾದದಲ್ಲಿ ಪಾಲ್ಗೊಂಡರು.