

ಶಿವಮೊಗ್ಗ: ಸಿದ್ದರಾಮಯ್ಯ ಎಷ್ಟು ವರ್ಷಕ್ಕೆ ಮದುವೆ ಆದ್ರು? ಎಷ್ಟು ವರ್ಷಕ್ಕೆ ಮಕ್ಕಳನ್ನ ಮಾಡಿದ್ರು? ಅವರಿಗೇನು ಗೊತ್ತಾಗಲ್ವಾ....?
- ಹೀಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡವರು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ. ಶಿವಮೊಗ್ಗದಲ್ಲಿ ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ಮಾಡುತ್ತಿರುವ ವಿರೋಧದ ಕುರಿತು ಮಾತನಾಡುವಾಗ ಅವರು ಈ ಮಾತನ್ನು ಹೇಳಿದರು.
ಅಗ್ನಿಪಥ್ ಯೋಜನೆಗೆ ಒಳಪಟ್ಟ ಯುವಕ 21 ವರ್ಷಕ್ಕೆ ನಿರುದ್ಯೋಗಿ ಅಗ್ತಾನೆ ಎಂದು ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, ಈ ಮಾತನ್ನು ಹೇಳಿದರು. ಏನ್ರಿ ಯುವಕ 21 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ತಾನಾ? ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವ್ವಾ ಎಂದು ಕಿಡಿ ಕಾರಿದರು.
ಪ್ರತಿಭಟನೆ ಹೆಸರಿನಲ್ಲಿ ರೈಲು ಸುಟ್ಟಿದ್ದಾರೆ ಅಷ್ಟೇ ಅಲ್ಲ, ಇಡಿ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಅಧಿಕಾರದ ಲಾಲಸೆ, ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿರುದ್ಯೋಗ ಯುವಕರನ್ನು ಏಕೆ ದಾರಿ ತಪ್ಪಿಸುತ್ತೀರಾ? ಕಾಂಗ್ರೆಸ್ನವರು ಯುವಕರು ಭಯೋತ್ಪಾದಕ ರೀತಿ ಆಗ್ತಾರೆ ಅಂತಾರೆ. ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡ್ತಿದ್ದಾರೆ ಎಂದರು.
ಇದೇ ವೇಳೆ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿರುವುದಕ್ಕೆ ಪ್ರತಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪನವರು, ಪ್ರತಿಭಟನೆಗೆ ಅವಕಾಶ ಇದೆ. ತಪ್ಪಿದ್ದರೆ ವಿರೋಧ ಮಾಡಬಹುದು. ರಾಹುಲ್ ಗಾಂಧಿ ವಿಚಾರಣೆಗೆ ಕರೆದ್ರೆ ತಪ್ಪಾ? ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆಯಲೇ ಬೇಡಿ ಅಂತಾ ನಿಮ್ಮ ಎಐಸಿಸಿ ಯಲ್ಲಿ ಒಂದು ರೆಸ್ಯೂಲುಷನ್ ಮಾಡಿ. ಅದರಲ್ಲೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇ ಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ವ್ಯಂಗ್ಯ ಮಾಡಿದರು.