‘ಬದುಕು ಸಿನಿಮಾ ಅನ್ನೋದು ಎಷ್ಟು ನಿಜವಾಗೋಯ್ತು! ಪುನೀತ್‌ ನನ್ನ ಜೀವನದಲ್ಲಿ ಮೂರು ಪಾತ್ರ ವಹಿಸಿದ್ದಾರೆ...’

Puneeth
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಮೃತಪಟ್ಟು ಎರಡು ವಾರಗಳು ಕಳೆದುಹೋದರೂ ಅವರು ಬಿಟ್ಟುಹೋಗಿರುವ ಹೆಜ್ಜೆ ಬೆಟ್ಟದಷ್ಟು. ತಮ್ಮ ಬದುಕಿನಲ್ಲಿ ಪುನೀತ್‌ ಮಾಡಿರುವ ಹಲವು ಕಾರ್ಯಗಳ ಬಗ್ಗೆ ಈಗ ಹಲವರು ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್‌ ಖ್ಯಾತಿಯ ನಟ ಶೈನ್ ಶೆಟ್ಟಿ ಕೂಡ ಈಗ ಭಾವನಾತ್ಮಕ ಪೋಸ್ಟ್‌ ಹಾಕಿದ್ದಾರೆ.

ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬರಹ ಹಂಚಿಕೊಂಡಿದ್ದಾರೆ.

'ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ! ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದ ಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್‌ರವರನ್ನು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಎದುರು ನೋಡುತ್ತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ. ಅವರ ಜತೆ ನಟಿಸಲು ಹಾಗೂ ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಳಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ನನ್ನ ಆಸೆ , ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು’ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸಿನಿಮಾ ರಂಗದಲ್ಲಿ ಉಳಿಯೋದಕ್ಕೆ/ಬೆಳೆಯೋದಕ್ಕೆ ಅಪ್ಪು ಸರ್‌ರವರ ಪ್ರೋತ್ಸಾಹ ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು. ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ . ಪುನೀತ್ ಸರ್‌ರವರನ್ನು ಅಷ್ಟು ಕೊಂಡಾಡಲು ಅವರ ಸುತ್ತ ಮುತ್ತ ಇದ್ದ ಜನರನ್ನು ವೃತ್ತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ! ಗಲ್ಲಿ ಕಿಚನ್ ಶುರುವಾದಾಗ , ತಮ್ಮ ಬೆಂಬಲದ ಜತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು. ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ ! ನೀವು ಕಲಿಸಿದ ಪಾಠ, ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳುತ್ತಾ, ಹೋಗ್ಬನ್ನಿ ಪುನೀತ್ ಸರ್'. ಎಂದು ಶೈನ್ ಪುನೀತ್‌ ಅವರಿಗೆ ವಿದಾಯದ ನುಡಿಗಳನ್ನಾಡಿದ್ದಾರೆ.

ಈ ಪೋಸ್ಟ್‌ಗೆ ಹಲವಾರು ಮಂದಿ ಕಮೆಂಟ್‌ ಮಾಡಿ ಪುನೀತ್‌ ಅವರನ್ನು ಹಾಡಿಹೊಗಳಿದ್ದಾರೆ. ತಮ್ಮ ಜೀವನದ ಮರೆಯಲಾಗದ ಮಾಣಿಕ್ಯ ಎಂದು ಕೊಂಡಾಡಿದ್ದಾರೆ.

ಇಲ್ಲಿದೆ ನೋಡಿ ಇನ್‌ಸ್ಟಾಗ್ರಾಂ ಪೋಸ್ಟ್‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net