

ವಿಜಯಪುರ: ಗಣೇಶ ಚತುರ್ಥಿಯ ದಿನವಾದ ನಿನ್ನೆ (ಆ.31) ವಿಜಯಪುರದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್ ಹಾಗೂ ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಬಕಡ್ಡಿ ಕ್ರಾಸ್ ಬಳಿ ಘಟನೆ ನಡೆದಿದೆ.
ಮೃತರನ್ನು ಕಲಬುರಗಿ ಜಿಲ್ಲೆಯ ಮೂಲದಕಲಶೆಟ್ಟಿ ಕುಟುಂಬದ ಸುನಂದಾ ಮಲ್ಲಿಕಾರ್ಜುನ ಕಲಶೆಟ್ಟಿ(25) ಅವರ ಮೂರು ತಿಂಗಳ ಮಗಳು ಸುಮನ್ ಹಾಗೂ ಶರಣಮ್ಮ ಬಸವರಾಜ ಕಲಶೆಟ್ಟಿ (55) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಕಾರು ಚಾಲಕ, ಇಬ್ಬರು ಮಕ್ಕಳು ಹಾಗೂ ಓರ್ವ ಮಹಿಳೆಗೆ ಗಂಭೀರ ಗಾಯಗಳಾಗಿವೆ.
ಒಂದು ಕಾರಿನ ಚಾಲಕ, ಇನ್ನೊಂದು ಕಾರಿಗೆ ಓವರ್ಟೇಕ್ ಮಾಡುವ ಭರದಲ್ಲಿ ಈ ಅವಘಡ ಸಂಭವಿಸಿದೆ. ಕಾರು ಓವರ್ ಟೇಕ್ ಮಾಡಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಬಳಿಕ ತಿರುಗಿದ ಕಾರಿಗೆ ಹಿಂಬದಿಯಿಂದ ಬಸ್ ಗುದ್ದಿದೆ. ಈ ಘಟನೆಯಿಂದಾಗಿ ಕಾರಿನ ಹಿಂಬದಿ ನುಜ್ಜುಗುಜ್ಜಾಗಿದೆ.
ಕಾರಿನಲ್ಲಿ ಸಿಲುಕಿದವರನ್ನು ಸ್ಥಳೀಯರು ಹೊರತೆಗೆದಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)