ಅರ್ಹರಿಗೆ ಮನೆ ನೀಡಲು ಎಸ್.ಎ.ರಾಮದಾಸ್ ಶ್ರಮ: ವಿದ್ಯಾ ಅರಸ್ ಮಾಹಿತಿ

S A Ramadas
Published on

ಮೈಸೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಸ್ವಂತ ಸೂರು ನೀಡಬೇಕು ಎಂಬ ಉದ್ದೇಶದಿಂದ ಶಾಸಕ ಎಸ್.ಎ.ರಾಮದಾಸ್ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಅವರ ವಿರುದ್ಧ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಕೆ.ಆರ್.ಕ್ಷೇತ್ರದ ಆಶ್ರಯ ಸಮಿತಿ ಸದಸ್ಯೆ ಎ.ವಿ.ವಿದ್ಯಾ ಅರಸ್ ಹೇಳಿದರು.


ಈಗಾಗಲೇ 12,500ಕ್ಕೂ ಹೆಚ್ಚು ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ನೀಡಲು ಬೇಕಾದ ಭೂಮಿಯನ್ನು ಸರ್ಕಾರದಿಂದ ಪಡೆದು, ಇದಕ್ಕೆ ಸಂಬಂಧಿಸಿದ ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆಗೂ ಅನುಮೋದನೆ ಪಡೆಯಲಾಗಿದೆ. ಇದಲ್ಲದೆ ಹೆಚ್ಚುವರಿ ಮನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳುವ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ 4562 ಮನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಂದ ಮನೆಗಳ ವಂತಿಗೆಯನ್ನು ಪಾವತಿಸಿಕೊಳ್ಳಲಾಗಿದೆ. ಆದರೆ, ಈ ಸಂಬಂಧ ಎರಡು ದಿನಗಳಿಂದ ಕೆಲವರು ರಾಜಕೀಯ ಮಾಡುತ್ತ ಪಾಲಿಕೆ ಎದುರು ಧರಣಿ ನಡೆಸುತ್ತಿರುವುದು ಖಂಡನೀಯ ಎಂದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವಧಿಯಲ್ಲಿ ಆಶ್ರಯ ಸಮಿತಿ ಸಭೆ ಅವರ ಅಧ್ಯಕ್ಷತೆಯಲ್ಲಿಯೇ ನಡೆದಿತ್ತು. ಆದರೆ ಜಮೀನು ಕೊರತೆ ಕಾರಣ ವೈಯಕ್ತಿಕ ಮನೆ ನಿರ್ಮಿಸಿ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಜಿ+2 ಮಾದರಿಯಲ್ಲಿ ಮನೆ ನಿರ್ಮಿಸಲು ನಿರ್ಧರಿಸಲಾಗಿತ್ತು ಎಂದು ತಿಳಿಸಿದರು.


ಗೊರೂರು ಬ್ಲಾಕ್ ನಂಬರ್ 8ರಲ್ಲಿ ಯಾರಿಗೆಲ್ಲ ನಿವೇಶನ ನೀಡಿ ನೋಂದಣಿ ಮಾಡಿಕೊಡಲಾಗಿತ್ತೋ ಅವರಿಂದ ಒಪ್ಪಿಗೆ ಪತ್ರ ಪಡೆದು ಜಿ+2 ಮಾದರಿ ಮನೆ ನಿರ್ಮಾಣದ ಯೋಜನೆಯ ಡಿಪಿಆರ್ ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಪಡೆದು, ಟೆಂಡರ್ ಕರೆದು ಮನೆಗಳ ನಿರ್ಮಾಣಕ್ಕೆ ಎಂ.ಕೆ. ಸೋಮಶೇಖರ್ ಅವರೇ ಮುಂದಾಗಿದ್ದರು. ಆದರೂ ಅವರಿಂದ ಮನೆ ನಿರ್ಮಾಣ ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಸದಸ್ಯರಾದ ಹೇಮಂತ್‌ಕುಮಾರ್, ಬಿ. ಗೌರಿ, ಹನ್ಸರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net