ಬಿಪಿಎಲ್ ಪಡೆದ 19,106 ಸರ್ಕಾರಿ ನೌಕರರು! ನೋಟಿಸ್ ಜಾರಿ- ಏಳು ವಾರಗಳಲ್ಲಿ ಉತ್ತರಿಸಲು ಸೂಚನೆ

BPL card
Published on

ಬೆಂಗಳೂರು: ಸರ್ಕಾರ ನಿಗದಿಪಡಿಸಿದ್ದ ಮಾನದಂಡ ಉಲ್ಲಂಸಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಪಡೆದಿರುವ 19,106 ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಆಹಾರ ಇಲಾಖೆ ನೋಟಿಸ್ ನೀಡಿದೆ.

ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕಾರ್ಡ್ ಪಡೆದು ಉಚಿತವಾಗಿ ನೀಡುವ ಅಕ್ಕಿ,ಗೋಧಿ, ರಾಗಿ, ಸಕ್ಕರೆ ಮತ್ತು ತಾಳೆ ಎಣ್ಣೆ ಸೇರಿ ಇನ್ನಿತರ ಪದಾರ್ಥ ಪಡೆದು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ)ಆದೇಶದನ್ವಯ ಶಾಸನಬದ್ಧ ಕಾರಣ ಕೇಳಿ ಇಲಾಖೆ ನೋಟಿಸ್ ನೀಡಿದೆ. ನೋಟಿಸ್ ತಲುಪಿ 7 ದಿನದೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಸರ್ಕಾರ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ.

ಪೊಲೀಸ್, ಶಿಕ್ಷಣ ಮತ್ತು ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಸಂಖ್ಯೆಯ ಕಾನ್‌ಸ್ಟೇಬಲ್, ಶಿಕ್ಷಕರು, ಚಾಲಕರು ಮತ್ತು ನಿರ್ವಾಹಕರು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಪಡೆದಿರುವುದು ಪತ್ತೆಯಾಗಿದೆ. ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಮತ್ತು ವೃತ್ತಿ ತೆರಿಗೆ ಪಾವತಿದಾರರು ಸೇರಿ ಆರ್ಥಿಕ ಸಬಲರು ಖೊಟ್ಟಿ ದಾಖಲೆಗಳನ್ನು ನೀಡಿ ಪಡೆದಿರುವ ಕಾರ್ಡ್‌ಗಳನ್ನು ಆಯಾ ತಾಲೂಕು ಕಚೇರಿಗೆ ಹಿಂದಿರುಗಿಸಬೇಕು. ಒಂದು ವೇಳೆ ಕಾರ್ಡ್ ವಾಪಸ್ ನೀಡದಿದ್ದಲ್ಲಿ ಸರ್ಕಾರವೇ ಪತ್ತೆ ಮಾಡಲಿದೆ. ಪಡಿತರ ಪಡೆದುಕೊಳ್ಳುತ್ತಿದ್ದ ದಿನದಿಂದ ಈವರೆಗೆ ಎಷ್ಟು ಆಹಾರ ಪದಾರ್ಥಗಳನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರೂ.ನಂತೆ ವಸೂಲಿ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.

ಕೆಲಸಕ್ಕೆ ಇಲ್ಲ ಕುತ್ತು: ಈ ಹಿಂದೆ ಖೊಟ್ಟಿ ದಾಖಲೆಗಳನ್ನು ನೀಡಿ ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಪಡೆದಿರುವ ಸರ್ಕಾರಿ ನೌಕರರು ಆತಂಕಪಡುವ ಅಗತ್ಯವಿಲ್ಲ. ಮೊದಲು ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ. ನೋಟಿಸ್ ತಲಪಿದ 7 ದಿನದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದ ಬಳಿಕ ಇಲಾಖೆ ಹೇಳಿದಷ್ಟು ದಂಡ ಕಟ್ಟಿದ್ದರೆ ಯಾವುದೇ ತೊಂದರೆ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net