ಬಿ.ಎಂ ಹಳ್ಳಿಯಲ್ಲಿ ರೈತ ಸಂಘ ಆರಂಭ

06 HANUR 3
Published on

ಹನೂರು: ತಾಲೂಕಿನ ಬಿ.ಎಂ ಹಳ್ಳಿ ಗ್ರಾಮದಲ್ಲಿ ಸೋಮವಾರ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು.
ನಂತರ ಮಾತನಾಡಿದ ಹೊನ್ನೂರು ಪ್ರಕಾಶ್, ಈ ಭಾಗದಲ್ಲಿ ರೈತ ಸಂಘಟನೆ ಇರಲಿಲ್ಲ. ಇದರಿಂದ ರೈತರು ಹಾಗೂ ಈ ಭಾಗದ ಜನರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಈ ದಿಸೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ರೈತ ಸಂಘವನ್ನು ಸ್ಥಾಪಿಸುವ ಸಂಬಂಧ ರೈತರ ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿತ್ತು. ಈ ವೇಳೆ ಬಿ.ಎಂ ಹಳ್ಳಿ ಮಾರ್ಗವಾಗಿ ಸಾರಿಗೆ ಬಸ್ ಸಂಚರಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಲಾಗಿತ್ತು. ಪರಿಣಾಮ ಇದೀಗ ಬಸ್ ಸಂಚಾರ ಆರಂಭವಾಗಿದೆ. ಜನರಿಗೆ ಅನುಕೂಲವಾಗಿದೆ. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದರೆ ಸಂಘಟನೆಯಿಂದ ಮಾತ್ರ ಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಶಾಂತಕುಮಾರ್, ಮಲ್ಲಯ್ಯನಪುರದ ಚಿಕ್ಕರಾಜು, ಕೆ.ವಿ.ಎನ್ ದೊಡ್ಡಿಯ ಶಿವಪ್ಪ, ಎಂ.ಟಿ ದೊಡ್ಡಿಯ ಶ್ರೀನಿವಾಸ್, ಭೈರನತ್ತದ ರಾಜು, ಮೈಕಲ್, ಪ್ರಭು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net