

ಬೆಂಗಳೂರು: ಎಂಥದ್ದೇ ಸನ್ನಿವೇಶ ಬಂದರೂ ವಾರದ ಏಳೂ ದಿನಗಳ ಕಾಲ ಪ್ರತಿನಿತ್ಯವೂ 24 ಗಂಟೆ ಪಾಳಿಯಲ್ಲಿ ವಹಿವಾಟು ನಡೆಸುತ್ತಿದ್ದ ಮಾರುಕಟ್ಟೆ ಶನಿವಾರ ಸೈಲೆಂಟ್ ಆಗಿದೆ. ಲಾಕ್ ಡೌನ್ ಘೋಷಣೆಯಾಗಿದ್ದರೂ ಇಲ್ಲಿ ವಹಿವಾಟು ನಿಂತಿರಲಿಲ್ಲ. ಆದರೆ ಕರೊನಾ ಸನ್ನಿವೇಶಕ್ಕೆ ಯಾವುದೇ ಜಾತಿ, ಸಮುದಾಯದ ಹಂಗಿಲ್ಲದ ಕಾರಣ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದ ಪರಿಣಾಮ ಏನೆಂಬುದನ್ನು ಸಾಬೀತುಪಡಿಸಿದೆ. ಈ ಮಾರುಕಟ್ಟೆಗೆ ಇದ್ಯಾವುದೂ ಏನೂ ಅಲ್ಲವೇನೋ ಎಂಬಂತೆ ಕಾರ್ಯಾಚರಿಸುತ್ತಿತ್ತು. ಮುಂಜಾಗ್ರತಾ ಕ್ರಮಕ್ಕೂ ಇಲ್ಲಿ ಇರಲಿಲ್ಲ ಕಿಮ್ಮತ್ತು. ಕೆಲವು ದಿನಗಳಿಂದ ಇದನ್ನೆಲ್ಲ ಗಮನಿಸುತ್ತಿದ್ದ ಸರ್ಕಾರ, ಕೊನೆಗೂ ಶುಕ್ರವಾರ ಗಟ್ಟಿಮನಸ್ಸು ಮಾಡಿ ಧೃಡ ನಿರ್ಧಾರದೊಂದಿಗೆ ಈ ಮಾರುಕಟ್ಟೆಯನ್ನು ಬಂದ್ ಮಾಡಿಸುವ ನಿರ್ಧಾರ ತೆಗೆದುಕೊಂಡಿದೆ.
ಹೌದು ಇದು ರಸೆಲ್ ಮಾರುಕಟ್ಟೆಯ ಕುರಿತಾದ ಸುದ್ದಿ. ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಏ.14ರವರೆಗೆ ಶಿವಾಜಿನಗರದ ರಸೆಲ್ ಮಾರುಕಟ್ಟೆಯನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ. ಹಾಗೆ, ಎಂದೂ ನಿದ್ದೆಯನ್ನೇ ಮಾಡದ ಮಾರುಕಟ್ಟೆಯೊಂದು ಬಹುಶಃ ಇದೇ ಮೊದಲ ಬಾರಿಗೆ ಸೈಲೆಂಟಾಗಿದೆ!
ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಈ ಸೂಚನೆ ಪಾಲಿಸದ ಕಾರಣ ಏ.14 ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಜತೆಗೆ ಮಾರುಕಟ್ಟೆ ಸುತ್ತಮುತ್ತ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಇಲ್ಲವೆಂದು ಪಾಲಿಕೆ ಪೂರ್ವ ವಲಯದ ಜಂಟಿ ಆಯುಕ್ತರಾದ ಕೆ.ಆರ್. ಪಲ್ಲವಿ ತಿಳಿಸಿದ್ದಾರೆ.