ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳಲು ನೂಕುನುಗ್ಗಲು

19-10-Shiva-1
Published on

ರಾಯಚೂರು: ನಗರದ ಹಳೇ ಆಶ್ರಯ ಕಾಲನಿಯಲ್ಲಿರುವ ಜಮಲಮ್ಮ ಗುಡಿ ಬಳಿಯ ಗುಡ್ಡದಲ್ಲಿನ ಸರ್ಕಾರಿ ಜಾಗದಲ್ಲಿ ಮುಖಂಡರೊಬ್ಬರ ಮಾತು ಕೇಳಿ ಜನರು ಗುಡಿಸಲು ಹಾಕಿಕೊಳ್ಳಲು ಮುಗಿಬಿದ್ದಿದ್ದಾರೆ. ಬೊಂಬು ಬಲ್ಲಿಸ್‌ಗಳನ್ನು ಕಟ್ಟಿ ತಮ್ಮ ಜಾಗ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ.
ಮನೆಯಿಲ್ಲದ ಕೂಲಿ ಕಾರ್ಮಿಕರಿಗೆ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಳ್ಳುವಂತೆ ಮುಖಂಡರು ಹೇಳಿದ್ದಾರೆ ಎಂದು ನಿನ್ನೆ ಸಂಜೆಯಿಂದ ಗುಂಪು ಗುಂಪಾಗಿ ಆಗಮಿಸಿದ ಜನರು ಸರ್ಕಾರಿ ಜಾಗದಲ್ಲಿ ಬೊಂಬು ಹಾಕಿ ಬಟ್ಟೆಗಳನ್ನು ಕಟ್ಟಿಕೊಂಡು ಜಾಗದಲ್ಲಿ ಕಾದು ಕುಳಿತುಕೊಂಡಿದ್ದಾರೆ.
ಮನೆಯಿಲ್ಲದ ಅನೇಕ ಕೂಲಿ ಕಾರ್ಮಿಕರು ಮನೆಗಾಗಿ ಅರ್ಜಿ ಸಲ್ಲಿಸಿದ್ದರೂ ನಗರಸಭೆಯಿಂದ ಮನೆ ಮಂಜೂರು ಮಾಡಿಲ್ಲ. ಜತೆಗೆ ಈ ಹಿಂದೆ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡಿದ ಟೀನ್ ಶೆಡ್ ಮನೆಗಳನ್ನು ತೆರವುಗೊಳಿಸಲಾಗಿತ್ತು. ಈಗ ಮುಖಂಡರ ಮಾತು ಕೇಳಿ ಪುನಃ ಜನರು ಗುಡಿಸಲು ಹಾಕಿಕೊಳ್ಳಲು ಮುಂದಾಗಿದ್ದಾರೆ.
ಈ ಹಿಂದೆ ಸರ್ಕಾರಿ ಜಾಗದಲ್ಲಿ ಜನರಿಗೆ ಗುಡಿಸಲು ಹಾಕಿಕೊಳ್ಳಲು ಹೇಳಿ ಕೆಲವು ಮುಖಂಡರು ಅವರಿಂದ ಬಾಡಿಗೆ ಪಡೆಯುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಅನಕೃತವಾಗಿ ಹಾಕಿಕೊಂಡಿದ್ದ ಶೆಡ್‌ಗಳನ್ನು ನಗರಸಭೆಯಿಂದ ತೆರವುಗೊಳಿಸಲಾಗಿತ್ತು.
ಈಗ ಪುನಃ ರಾಜಕೀಯ ಮುಖಂಡರ ಮಾತು ಕೇಳಿ ಜನರು ಗುಡಿಸಲು ನಿರ್ಮಾಣಕ್ಕೆ ತಮ್ಮ ಜಾಗ ಗುರುತಿಸಿಕೊಳ್ಳಲು ಮುಂದಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು, ಬಡ ಜನರು ಆಗಮಿಸಿ ತಮ್ಮ ಜಾಗ ಗುರುತಿಸಲು ಮುಂದಾಗಿದ್ದರಿಂದ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ವಿಷಯ ತಿಳಿದ ನಗರಸಭೆ ಅಕಾರಿಗಳು ಗುರುವಾರ ಸ್ಥಳಕ್ಕೆ ಆಗಮಿಸಿ ಬೊಂಬು, ಬಲ್ಲೀಸ್‌ಗಳನ್ನು ತೆರವುಗೊಳಿಸಿದ ನಂತರವೂ ಹಲವರು ಪುನಃ ಆಗಮಿಸಿ ಜಾಗ ಗುರುತಿಸಲು ಮುಂದಾಗಿದ್ದು, ಇದರ ಹಿಂದೆ ರಾಜಕೀಯ ಮುಖಂಡರೊಬ್ಬರ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net