

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಲಬುರ್ಗಿ ವ್ಯಾಪ್ತಿಯಲ್ಲಿ ಅಂದಾಜು 15 ಲಕ್ಷ ನೋಂದಾಯಿತ ಕಾರ್ಮಿಕರಿದ್ದು, ಈ ಪೈಕಿ ಅರ್ಹ 1,400 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅನ್ನು ಮಂಡಳಿಯಿಂದ ವಿತರಿಸಲು ಇದೇ ಮೊದಲ ಬಾರಿ ತೀರ್ಮಾನಿಸಲಾಗಿದೆ.
ಈ ಸಂಬಂಧ ಸೆ. 1ರಿಂದಲೇ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಕಲಬುರ್ಗಿ ವ್ಯಾಪ್ತಿಯ 9 ಜಿಲ್ಲೆಗಳ ಕಾರ್ಮಿಕ ಇಲಾಖೆ ಮುಂಭಾಗ ನಿತ್ಯ ಬೆಳಗ್ಗೆಯೇ ಸಾವಿರಾರು ಮಂದಿ ಜಮಾಯಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು, ಮೂರ‌್ನಾಲ್ಕು ಗಂಟೆ ಕಾದು ಸಲ್ಲಿಸಲು ಹರಸಾಹಸ ಪಡುತ್ತಿದ್ದಾರೆ.
ಅರ್ಜಿ ಸಲ್ಲಿಕೆಗೆ ಸೆ.15 ಕೊನೆಯ ದಿನವಾಗಿದ್ದು, ಗುರುವಾರ ಕೂಡ ಕಿಕ್ಕಿರಿದು ಜನ ಸೇರಿದ್ದರು. ಅವರನ್ನು ನಿಯಂತ್ರಿಸಲು ಇಲಾಖೆ ಸಿಬ್ಬಂದಿ ಕೂಡ ಹೈರಾಣಾದರು. ಕೆಲವೆಡೆ ಗೇಟ್ ಮುಚ್ಚಿ ಒಮ್ಮೆಗೆ ಹತ್ತರಿಂದ 15 ಮಂದಿಯನ್ನು ಮಾತ್ರ ಒಳಗೆ ಕಳಿಸುವ ಪ್ರಕ್ರಿಯೆ ನಡೆಯಿತು.
ನೋಂದಾಯಿತ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ವಿತರಣೆ ಸಂಖ್ಯೆ ಕಡಿಮೆ ಇದ್ದರೂ ಅರ್ಜಿ ಸಲ್ಲಿಸುವಲ್ಲಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ. ಪುರುಷ-ಮಹಿಳಾ ಕಾರ್ಮಿಕರೆನ್ನದೆ ಮಕ್ಕಳ ಪರ ರಾಜ್ಯದೆಲ್ಲೆಡೆ ಅರ್ಜಿ ಸಲ್ಲಿಸಲು ಪೈಪೋಟಿ ಜೋರಾಗಿಯೇ ನಡೆದಿದೆ.
ಪ್ರಕ್ರಿಯೆ ಸುಲಭವಲ್ಲದಿದ್ದರೂ ಶೇ.50, ಶೇ.60 ಅಂಕಗಳಿಸಿರುವ ಮಕ್ಕಳ ಪಾಲಕರೂ, ಕಟ್ಟಡ ಕಾರ್ಮಿಕರಲ್ಲದವರೂ ತಮ್ಮ ಮಕ್ಕಳಿಗೆ ಲ್ಯಾಪ್‌ಟಾಪ್ ಸಿಗಲಿ ಎಂಬ ಆಶಯದೊಂದಿಗೆ ಅರ್ಜಿ ಸಲ್ಲಿಸಲು ನಾ ಮುಂದು.. ತಾ ಮುಂದು.. ಎಂಬಂತೆ ಮುಗಿಬಿದ್ದ ದೃಶ್ಯ ಕಂಡುಬಂದಿತು.
ಮಾನದಂಡ ಪ್ರಕಟಿಸಬೇಕಿತ್ತು: ಆಯಾ ಜಿಲ್ಲಾ ವ್ಯಾಪ್ತಿಯ ವಿವಿಧ ತಾಲೂಕುಗಳಿಂದ ಕೂಲಿ ಕೆಲಸ ಬಿಟ್ಟು ತಮ್ಮ ಮಕ್ಕಳ ದಾಖಲೆ ಸಮೇತ ಅನೇಕರು ಇಲಾಖೆಯತ್ತ ಮುಖ ಮಾಡುತ್ತಿದ್ದಾರೆ. ದಿನಗೂಲಿ ವೇತನ, ತಿಂಡಿ-ಊಟ, ಬಸ್ ಚಾರ್ಜ್ ಇತರ ಎಲ್ಲವೂ ಸೇರಿ ಅಂದಾಜು 1 ಸಾವಿರ ರೂ. ಖರ್ಚಾಗುತ್ತಿದ್ದು, ಮಾನದಂಡ ಪ್ರಕಟಿಸದಿರುವ ಕಾರಣ ಈವರೆಗೂ ಲಕ್ಷಾಂತರ ಅರ್ಜಿ ಸಲ್ಲಿಕೆಯಾಗಿವೆ.
ನಿಯಮಗಳೇನು?: ಅರ್ಜಿ ಸಲ್ಲಿಸುವ ಪಾಲಕರು ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು. ಅವರ ಮಕ್ಕಳು ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿ, ಪಿಯುಸಿ ವ್ಯಾಸಂಗ ಮಾಡುತ್ತಿರಬೇಕು. ಅಂಕಗಳ ಆಧಾರದ ಮೇಲೆ ಸೌಲಭ್ಯ ದೊರೆಯಲಿದ್ದು, ವಿತರಣೆಯ ನಿಗದಿತ ಗುರಿ ಕಡಿಮೆ ಇರುವ ಕಾರಣ ಶೇ.100 ಅಂಕದಿಂದ ಪ್ರಕ್ರಿಯೆ ಆರಂಭವಾಗಿ ಶೇ.95 ಅಥವಾ 90ಕ್ಕೆ ಮುಕ್ತಾಯವಾಗಬಹುದು ಎಂದು ಅಂದಾಜಿಸಲಾಗಿದೆ.
ಸಮಿತಿಯಲ್ಲಿ ಆಯ್ಕೆ: ಅರ್ಜಿಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳೇ ಅಳೆದು-ತೂಗಿ ಜಿಲ್ಲೆಯ ನಿಗದಿತ ಗುರಿಯಂತೆ ಆಯ್ಕೆ ಮಾಡಿ ಸಮಿತಿ ಮುಂದೆ ಇಡಲಿದ್ದಾರೆ. ಆಯಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಸಮಿತಿ ಅಧ್ಯಕ್ಷರಾಗಿದ್ದು, ಡಿಡಿಪಿಐ, ಪಿಯು ಡಿಡಿ, ಕಾರ್ಮಿಕಾಧಿಕಾರಿ, ಕಾರ್ಮಿಕ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಅರ್ಹರ ಪಟ್ಟಿ ಅಂತಿಮಗೊಳ್ಳಲಿದೆ.
ಅರ್ಜಿ ಸಂಖ್ಯೆ ಹೆಚ್ಚಳ: ಪಾರದರ್ಶಕ, ನ್ಯಾಯ ಸಮ್ಮತವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ ಮಂಡಳಿಯಿಂದ ಟ್ಯಾಬ್ ವಿತರಿಸಲಾಗಿತ್ತು. ಈ ಬಾರಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಲ್ಯಾಪ್‌ಟಾಪ್ ನೀಡಲು ತೀರ್ಮಾನಿಸಿದೆ. 14 ದಿನಗಳಿಂದಲೂ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಿದೆ.- ರಾಜಣ್ಣ, ಕಾರ್ಮಿಕ ನಿರೀಕ್ಷಕ, ಕಾರ್ಮಿಕ ಇಲಾಖೆ, ಚಿತ್ರದುರ್ಗ
ಸರಿಯಲ್ಲ: ಅರ್ಹ ಕಾರ್ಮಿಕರಿಗೆ ತೊಂದರೆಯಾದ ವೇಳೆ ಭದ್ರತೆಗಾಗಿ ಬಳಸುವ ಹಣವನ್ನು ಸಾಮಗ್ರಿ, ಇತರೆ ವಸ್ತುಗಳನ್ನು ಖರೀದಿಸಿ ವಿತರಿಸುವುದು ಸರಿಯಲ್ಲ. ಕಾರ್ಮಿಕರ ಮಕ್ಕಳ ಕುರಿತು ಸರ್ಕಾರಕ್ಕೆ ಕಾಳಜಿ ಇದ್ದರೆ ಪ್ರತ್ಯೇಕ ಅನುದಾನದಲ್ಲಿ ಬೇಕಾದರೆ ವಿತರಿಸಲಿ. ಮಂಡಳಿಯಲ್ಲಿ ಸಂಗ್ರಹವಾದ ಹಣ ಬಳಸದಂತೆ ಮನವಿ ಕೂಡ ಸಲ್ಲಿಸಿದ್ದೇವೆ.-ವೈ.ಕುಮಾರ್, ಪ್ರ.ಕಾರ್ಯದರ್ಶಿ, ರಾಜ್ಯ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ಚಿತ್ರದುರ್ಗ