

ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಸೋಮವಾರ ಸಾವಿರಾರು ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಏರಲು ನೂಕುನುಗ್ಗಲು ಉಂಟಾಗಿತ್ತು.
ಹೊಸ ವರ್ಷದ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಬೆಂಗಳೂರು, ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಚಾಮರಾಜನಗರ ಇತರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅದರಲ್ಲೂ ಶಕ್ತಿ ಯೋಜನೆಯ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಕಳೆದ ಎರಡು ದಿನದ ಹಿಂದೆ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಆಗಮಿಸಿ ಮ.ಬೆಟ್ಟದಲ್ಲಿಯೇ ಬೀಡು ಬಿಟ್ಟಿದ್ದರು. ಸೋಮವಾರ ದೇವರ ದರ್ಶನ ಹಾಗೂ ಪೂಜೆ ಸಲ್ಲಿಸಿದ ಬಳಿಕ ಭಕ್ತರು ತಮ್ಮ ಊರುಗಳಿಗೆ ಹಿಂತಿರುಗಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಇರಲಿಲ್ಲ. ಇದರಿಂದ ಬಸ್ಸಿಗಾಗಿ ಕಾದು ನಿಲ್ಲುವಂತಾಗಿತ್ತು.
ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಮಹಿಳೆಯರು ಸೀಟ್ ಹಿಡಿಯಲು ಮುಗಿ ಬಿದ್ದರಲ್ಲದೇ ಕೆಲವರು ಕಿಟಕಿಯ ಮೂಲಕ ನುಗ್ಗಿ ಸೀಟು ಹಿಡಿದರು. ಈ ವೇಳೆ ಪುರುಷರು ಸೀಟ್‌ಗಾಗಿ ಹರಸಾಹಸ ಪಡಬೇಕಾಯಿತು. ಇನ್ನು ಬಸ್ ಏರುವಾಗ ನೂಕುನುಗ್ಗಲು ಉಂಟಾದ್ದರಿಂದ ಕೆಲವು ಭಕ್ತರು ಬಸ್‌ಗಾಗಿ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯ್ದು ತೊಂದರೆ ಅನುಭವಿಸಿದರು. ಜತೆಗೆ ಬಸ್‌ಗಳು ತುಂಬಿದ್ದರಿಂದ ಪ್ರಯಾಣಿಕರು ನಿಂತೇ ಪ್ರಯಾಣಿಸಿದರು. ಖಾಸಗಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲೇ ಸಂಚರಿಸಿದವು.