ಆಹಾರಕ್ಕಾಗಿ ನಾಡಿನತ್ತ ಆನೆಗಳ ದಾಂಗುಡಿ

Kailancha-Ph-001-Ane Neeru Thenginkal Story-Photo Dammage Former Borewell -11-4-2024
Published on

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿಯ ತೆಂಗಿನಕಲ್ಲು ಅರಣ್ಯ ಪ್ರದೇಶದ ಕೆರೆಗಳಲ್ಲಿ ನೀರಿಲ್ಲದೆ ಆನೆಗಳು ನಾಡಿನತ್ತ ದಾಂಗುಡಿ ಇಡುತ್ತಿವೆ. ಅಲ್ಲದೆ, ರೈತರ ಕೊಳವೆಬಾವಿಗಳು ಹಾಗೂ ಪೈಪ್ ಸೇರಿ ನೀರಿನ ಪರಿಕರಗಳು ಆನೆಗಳ ದಾಳಿಗೆ ನಾಶವಾಗುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬರದಿಂದಾಗಿ ತೆಂಗಿನಕಲ್ಲು ಅರಣ್ಯ ಭಾಗದಲ್ಲಿ ಕೆರೆ-ಕುಂಟೆಗಳು ಖಾಲಿಯಾಗಿವೆ. ಬಿದಿರು ತಿನ್ನಲು ತೆಂಗಿನಕಲ್ಲು ಅರಣ್ಯದಲ್ಲಿ ಕೆಲವು ವರ್ಷಗಳ ಹಿಂದೆ ಆಗೊಂದು ಈಗೊಂದು ಆನೆಗಳು ಬರುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ತೆಂಗಿನಕಲ್ಲು ಅರಣ್ಯ ಕಾವೇರಿ ವನ್ಯಜೀವಿಧಾಮವನ್ನು ಮೀರಿಸುವಂತೆ ಆನೆಗಳ ಆಶ್ರಯತಾಣ ಆಗುತ್ತಿದೆ.

15 ದಿನಗಳಿಂದಲೂ ತೆಂಗಿನಕಲ್ಲು ಅರಣ್ಯದಲ್ಲಿ 20ಕ್ಕೂ ಹೆಚ್ಚಿನ ಆನೆಗಳು ಬೀಡುಬಿಟ್ಟಿವೆ. ವಾರದ ಹಿಂದೆ 28 ಆನೆಗಳು ಅರಣ್ಯಕ್ಕೆ ಬಂದಿದ್ದವು. ಇಲಾಖೆ 8 ಆನೆಗಳನ್ನು ನಾಲ್ಕು ದಿನಗಳ ಹಿಂದೆ ಕಾರ್ಯಾಚರಣೆ ನಡೆಸಿ ಸ್ವಸ್ಥಾನಕ್ಕೆ ಅಟ್ಟಿದೆ. ಈಗ ತೆಂಗಿನಕಲ್ಲು ಅರಣ್ಯ ಭಾಗದಲ್ಲಿ ಬಾಕಿಯಾಗಿರುವ ಆನೆಗಳಿಗೆ ನೀರು ಸಿಗದೆ ನಾಡಿನತ್ತ ಮುಖ ಮಾಡಿವೆ.  ಸುತ್ತಮುತ್ತಲ ಗ್ರಾಮಗಳ ರೈತರ ತೋಟಕ್ಕೆ ಲಗ್ಗೆ ಇಟ್ಟು ರೈತರ ಕೊಳವೆಬಾವಿ ನಾಶಪಡಿಸುತ್ತಾ ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಅಲ್ಲದೇ ನೂರಾರು ರೈತರ ಕೊಳವೆಬಾವಿಗಳು ಆನೆಗಳ ನೀರಿನ ದಾಹಕ್ಕೆ ನಾಶವಾಗುತ್ತಿವೆ. ವಿದ್ಯುತ್ ಸಂಪರ್ಕ ಕಲ್ಪಿಸಿ ಆನೆ ಹಾವಳಿ ತಡೆಗೆ ಮುಂದಾದರೂ ಆನೆಗಳ ಪ್ರಾಣಕ್ಕೆ ವಿದ್ಯುತ್ ಸಂಪರ್ಕದಿಂದ ತೊಂದರೆ ಉಂಟಾದರೆ ಸಂಕಷ್ಟ ಎದುರಿಸಬೇಕಾಗಿರುತ್ತದೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ರಾತ್ರಿಯಾದರೆ ತೋಟಗಳಿಗೆ ಲಗ್ಗೆ

ರಾತ್ರಿಯಾದರೆ ಸಾಕು ತೆಂಗಿನಕಲ್ಲು ಅರಣ್ಯಪ್ರದೇಶ ಹಾಗೂ ಸುತ್ತಮುತ್ತಲ ನೆಲಮಲೆ, ಕಾಡನಕುಪ್ಪೆ, ಅವ್ವೇರಹಳ್ಳಿ, ದೊಡ್ಡನಹಳ್ಳಿ, ಬಿ.ವಿ. ಹಳ್ಳಿ, ಬೇಲಿ ಕೊತ್ತನೂರು, ಕವಣಾಪುರ, ರೇವಣಸಿದ್ದೇಶ್ವರಬೆಟ್ಟ, ತೆಂಗಿನಕಲ್ಲು, ದೇವರದೊಡ್ಡಿ, ಹೊಸದೊಡ್ಡಿ ಗ್ರಾಮಗಳ ರೈತರ ತೋಟಗಳಿಗೆ ಲಗ್ಗೆ ಇಡುತ್ತಿವೆ. ಒಂಟಿಯಾಗಿ, ಜೋಡಿ, ಒಮ್ಮೊಮ್ಮೆ ನಾಲ್ಕೈದು ಹೀಗೆ ಹಿಂಡುಹಿಂಡಾಗಿ ರೈತರ ತೊಟಗಳಿಗೆ ದಾಳಿ ಇಡುತ್ತಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಬರಗಾಲದಲ್ಲೂ ಒಂದಷ್ಟು ಫಸಲು ಕಂಡು ರೇಷ್ಮೆ, ಹೈನುಗಾರಿಕೆಗೆ ಹುಲ್ಲು ಬೆಳೆದು, ಜೀವನಕ್ಕೆ ದಾರಿ ಕಂಡಿರುವ ರೈತರಿಗೆ ಆನೆಗಳು ಕೊಳವೆಬಾವಿ ಪರಿಕರ ನಾಶ ಮಾಡುತ್ತಿರುವುದು ಬಿಸಿತುಪ್ಪವಾಗಿ ಪರಿಣಮಿಸಿದೆ.

ಸಾಧ್ಯವಾಗದ ನಿಯಂತ್ರಣ

ನೀರಿಗಾಗಿ ಹಾತೊರೆಯುವ ಆನೆಗಳು ಕೊಳವೆಬಾವಿಗೆ ಅಳವಡಿಸಿರುವ ಪೈಪ್‌ಗಳನ್ನು ತುಳಿದು ನಾಶ ಮಾಡುತ್ತಿವೆ. ಈಗಾಗಲೇ ನೂರಾರು ರೈತರು ಕೊಳವೆಬಾವಿಗಳನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿದ್ದಾರೆ.  ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುವ ಮೂಲಕ ಸ್ವಸ್ಥಾನಕ್ಕೆ ಅಟ್ಟುವ ಕೆಲಸ ಮಾಡುತ್ತಾ ಬರುತ್ತಿದೆ. ಆದರೂ ಆನೆಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅರಣ್ಯದಲ್ಲಿ ಕೆರೆ-ಕುಂಟೆಗಳು ಖಾಲಿಯಾಗಿ ನೀರಿನ ಬವಣೆ ಹೆಚ್ಚಿದೆ. ಅರಣ್ಯ ಇಲಾಖೆ ಆನೆಗಳಿಗೆ ನೀರು ಸಿಗುವಂತೆ ಮಾಡಲು ಕೂಡಲೇ ಅರಣ್ಯದಂಚಿನ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಜತೆಗೆ ನಾಡಿನತ್ತ ಆನೆಗಳು ಮುಖ ಮಾಡದಂತೆ ಎಚ್ಚರವಹಿಸಬೇಕು. ಇದರಿಂದ ರೈತರಿಗೆ ನಷ್ಟ ತಪ್ಪಲಿದೆ ಎನ್ನುತ್ತಾರೆ ರೈತ ಹೊಸದೊಡ್ಡಿ ಯೋಗೇಶ್.

ಶುದ್ಧನೀರಿನ ಹುಡುಕಾಟ

ಆನೆಗಳು ಕುಡಿಯಲು ಶುದ್ಧ ನೀರು ಹುಡುಕುತ್ತವೆ. ಪ್ರಸ್ತುತ ಅರಣ್ಯದ ಕೆರೆಗಳಲ್ಲಿ, ಗ್ರಾಮಗಳ ಸುತ್ತಮುತ್ತಲ ದೊಡ್ಡದೊಡ್ಡ ಕೆರೆಗಳಲ್ಲಿ ನೀರಿಲ್ಲ. ಶುದ್ಧನೀರು, ಹಸಿರು ಮೇವನ್ನು ಅರಸಿ ರೈತರ ತೋಟಗಳತ್ತ ಆನೆಗಳು ಮುಖಮಾಡುತ್ತಿವೆ.

ಹಸಿರು ಪ್ರದೇಶಕ್ಕೆ ಲಗ್ಗೆ

ತೆಂಗಿನಕಲ್ಲು ಭಾಗ ಹಸಿರುಮಯವಾಗಿದೆ. ಹೆಚ್ಚಿನ ರೈತರು ಬೋರ್‌ವೆಲ್ ಹಾಕಿಸಿ ತೋಟಗಾರಿಕಾ ಬೆಳೆ ಬೆಳೆಯುತ್ತಿದ್ದಾರೆ. ಈ ಕಾರಣಕ್ಕೆ ಬಹುತೇಕ ಹಸಿರು ಪ್ರದೇಶ ಕಾಣುವುದರಿಂದ ಆನೆಗಳು ಹಸಿರಿರುವ ಜಾಗಕ್ಕೆ ದಾಂಗುಡಿ ಇಟ್ಟು ರೈತರಿಗೆ ಬರೆ ಎಳೆಯುತ್ತಿವೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ ಮತ್ತೆಮತ್ತೆ ವಾಪಸ್ ಬಂದು ಇಲಾಖೆಗೆ ತಲೆನೋವು ತರುತ್ತಿವೆ.

ಆನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟು ಹಸಿರು ಮೇವು, ನೀರಿಗಾಗಿ ಓಡಾಟ ನಡೆಸುತ್ತಿವೆ. ವಿಂಗಡಣೆಯಾಗಿರುವ ಆನೆಗಳನ್ನು ಇಲಾಖೆ ಒಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿದೆ. ಬಿಸಿಲಿನ ತಾಪ ಹೆಚ್ಚಿರುವ ಕಾರಣ ಆನೆಗಳ ಕಾರ್ಯಾಚರಣೆಗೆ ತೊಡಕಾಗಿದೆ. ಬಿಸಿಲು ಕಡಿಮೆಯಾದ ಕೂಡಲೇ ಬೃಹತ್ ಕಾರ್ಯಾಚರಣೆ ಮೂಲಕ ಸ್ವಸ್ಥಾನದತ್ತ ಆನೆಗಳನ್ನು ಸೇರಿಸಲಾಗುವುದು.

ರಾಮಕೃಷ್ಣಪ್ಪ, ಡಿಎಫ್‌ಒ, ರಾಮನಗರ

ತೆಂಗಿನಕಲ್ಲು ಅರಣ್ಯದಲ್ಲಿ ಹಿಂಡುಹಿಂಡು ಆನೆಗಳು ಕಾಣುತ್ತಿವೆ. ಎಲ್ಲಿಂದ ಹೇಗೆ ಬರುತ್ತಿವೆ ಎಂಬುದೇ ತಿಳಿಯದಾಗಿದೆ. ಅರಣ್ಯದಲ್ಲಿ ನೀರು ಸಿಗದ ಕಾರಣ ರೈತರ ತೋಟಕ್ಕೆ ನುಗ್ಗಿ ಕೊಳವೆಬಾವಿ, ಪೈಪ್, ನೀರಿನ ಪರಿಕರ ಧ್ವಂಸಮಾಡಿ ಹೋಗುತ್ತಿವೆ. ಇದೇ ರೀತಿ ಆನೆಗಳ ಉಪಟಳ ಮುಂದುವರಿದರೆ ಈ ಭಾಗದ ರೈತರಂತೂ ಒಂದು ಹಸಿರು ಗರಿ ಬೆಳೆಯಲೂ ಸಾಧ್ಯವಾಗುವುದಿಲ್ಲ.

ಕಾಳಾನಾಯ್ಕ, ದೇವರದೊಡ್ಡಿ ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net