ಒಟಿಎಸ್ ಪಾವತಿಸಲು ಪಾಲಿಕೆ ಕಚೇರಿಗಳಲ್ಲಿ ರಷ್: ಶನಿವಾರವೇ ಗಡುವು ಮುಕ್ತಾಯ

bbmp office
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರಿಗೆ ಜಾರಿ ಮಾಡಿರುವ ಒಂದು ಬಾರಿ ಇತ್ಯರ್ಥ (ಒಟಿಎಸ್) ಯೋಜನೆ ಶನಿವಾರ (ನ.30) ಕೊನೆಗೊಳ್ಳಲಿದ್ದು, ಪಾಲಿಕೆ ಕಂದಾಯ ಕಚೇರಿಗಳು, ಬೆಂಗಳೂರು ಒನ್ ಕೇಂದ್ರಗಳ ಕೌಂಟರ್‌ಗಳ ಬಳಿ ಜನಸಂದಣಿ ಕಾಣಿಸಿಕೊಂಡಿದೆ.

ಗಡುವು ಮುಗಿಯಲು ಎರಡೇ ದಿನ ಬಾಕಿ ಇರುವುದರಿಂದ ಸಾರ್ವಜನಿಕರು ಕಡೆ ಗಳಿಗೆಯಲ್ಲಿ ತರಾತುರಿಯಲ್ಲಿ ಪಾಲಿಕೆಯ ಕಂದಾಯ ಕಚೇರಿಗಳಿಗೆ ಆಗಮಿಸಿ ತೆರಿಗೆ ಪಾವತಿಸಲು ಮುಂದಾಗಿದ್ದಾರೆ. ಬಾಕಿ ಪಾವತಿಸಿದರೆ ದಂಡ ಹಾಗೂ ಬಡ್ಡಿ ಮನ್ನಾ ಇರುವುದರಿಂದ ಸ್ವತ್ತುದಾರರಿಗೆ ಹೆಚ್ಚಿನ ಅನುಕೂಲ ಉಂಟಾಗಿದೆ. ಈ ಸೌಲಭ್ಯ ಪಡೆಯಲು ಸಾಕಷ್ಟು ಅವಕಾಶ ನೀಡಿದ್ದರೂ, ಗಡುವು ಮುಗಿಯುವ ಸಮಯದಲ್ಲಿ ತೆರಿಗೆ ಪಾವತಿಸುವಲ್ಲಿ ಜನರು ಗಡಿಬಿಡಿಯೊಂದಿಗೆ ಪಾವತಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಆನ್‌ಲೈನ್‌ನಲ್ಲೂ ಪಾವತಿಗೆ ಅವಕಾಶ ಇದ್ದು, ಆ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ತೊಂದರೆ:

ಒಟಿಎಸ್ ಪಾವತಿಸುವ ಸಂದರ್ಭದಲ್ಲಿ ಆನ್‌ಲೈನ್ ಸೇವೆಗಳಲ್ಲಿ ಕೆಲ ವ್ಯತ್ಯಯ ಕಂಡುಬಂದಿದೆ. ಸರ್ವರ್ ನಿಧಾನ ಇರುವುದರಿಂದ ಬೇಗನೆ ಕಾರ್ಯ ಆಗುತ್ತಿಲ್ಲ. ಕೆಲ ನಿಮಿಷಗಳ ಕಾಲ ಕಾಯಬೇಕಿದೆ. ಇದೇ ಸ್ಥಿತಿ ಕೆಲವು ಬೆಂಗಳೂರು ಒನ್ ಕೇಂದ್ರಗಳಲ್ಲೂ ಕಂಡುಬಂದಿದೆ. ಕಚೇರಿ ಸಮಯದ ವೇಳೆ ಈ ಸಮಸ್ಯೆ ಹೆಚ್ಚಿರುವುದನ್ನು ಪಾಲಿಕೆ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಸಾರ್ವಜನಿಕರು ಒಮ್ಮಲೇ ಆನ್‌ಲೈನ್ ಸೇವೆ ಪಡೆಯಲು ಪ್ರಯತ್ನಿಸುತ್ತಿರುವ ಕಾರಣ ಸರ್ವರ್ ಸ್ವಲ್ಪ ನಿಧಾನಗೊಂಡಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

3,820 ಕೋಟಿ ರೂ. ಸಂಗ್ರಹ:

ಪ್ರಸಕ್ತ ಆರ್ಥಿಕ ವರ್ಷದಲ್ಲಿ (2024-25) ಆಸ್ತಿ ತೆರಿಗೆ ಅಡಿಯಲ್ಲಿ 5,200 ಕೋಟಿ ರೂ. ವಸೂಲು ಮಾಡುವ ಗುರಿ ಹೊಂದಲಾಗಿದೆ. ನ.27ರ ವರೆಗೆ 3,820.23 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಪೈಕಿ 600 ಕೋಟಿ ರೂ. ಒಟಿಎಸ್ ಅಡಿಯಲ್ಲಿ ಸಂಗ್ರಹವಾಗಿದೆ. ಗಡುವು ಮುಗಿಯುವ ವೇಳೆಗೆ ಒಟ್ಟು 4,200 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಡಿ.1ರಿಂದ ದಂಡ, ಬಡ್ಡಿ ಅನ್ವಯ:

ಒಟಿಎಸ್ ಸೌಲಭ್ಯದಡಿ ಬಾಕಿ ಮೊತ್ತಕ್ಕೆ ಬಡ್ಡಿ ಹಾಗೂ ದಂಡದ ಮೊತ್ತದಲ್ಲಿ ವಿನಾಯಿತಿ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವುದಿಲ್ಲ. ಗಡುವಿನೊಳಗೆ ಪಾವತಿಸದ ಸ್ವತ್ತುದಾರರಿಂದ ಬಾಕಿ ಮೊತ್ತಕ್ಕೆ ಬಡ್ಡಿ ಹಾಗೂ ದಂಡವನ್ನು ಡಿ.1ರಿಂದಲೇ ವಸೂಲು ಮಾಡಲಾಗುವುದು. ಇದಕ್ಕಾಗಿ ಪಾಲಿಕೆ ಸಿಬ್ಬಂದಿ ಸ್ವತ್ತುದಾರರ ವಿಳಾಸಕ್ಕೆ ತೆರಳಿ ಬಾಕಿ ಹಣ ವಸೂಲು ಮಾಡಲಿದ್ದಾರೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ರೂ.ಗಳಲ್ಲಿ):

ವಲಯ ವಸೂಲಾತಿ

ಪೂರ್ವ 658.08

ಪಶ್ಚಿಮ 405.37

ದಕ್ಷಿಣ 547.90

ಆರ್.ಆರ್.ನಗರ 300.14

ಬೊಮ್ಮನಹಳ್ಳಿ 388.63

ದಾಸರಹಳ್ಳಿ 115.03

ಮಹದೇವಪುರ 1,010.10

ಯಲಹಂಕ 394.99

ಒಟ್ಟು 3,820.23

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net