

ಲಕ್ಷೆ್ಮೕಶ್ವರ: ಕಳೆದೊಂದು ತಿಂಗಳಿಂದಲೂ ಯೂರಿಯಾ ಗೊಬ್ಬರಕ್ಕಾಗಿ ರೈತರು ಸರದಿ ಸಾಲಿನಲ್ಲಿ ನಿಂತು ನೂಕು ನುಗ್ಗಲಲ್ಲಿ ಪೊಲೀಸರ ಕಾವಲಿನಲ್ಲಿ ಒಬ್ಬರಿಗೆ ಒಂದು ಚೀಲದಂತೆ ಗೊಬ್ಬರ ತೆಗೆದುಕೊಂಡು ಹೋಗುವ ಪರಿಸ್ಥಿತಿ ತಪ್ಪದಂತಾಗಿದೆ.
ಮುಂಗಾರಿನ ಸಕಾಲಿಕ ಮಳೆಯಿಂದ ಬಿತ್ತಿದ್ದ ಬೆಳೆಗಳು ಸಮೃದ್ಧವಾಗಿದ್ದು, ಇದೀಗ ಫಲ ಬಿಡುವ ಹಂತದಲ್ಲಿವೆ. ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಬೆಳೆಗೆ ಮತ್ತೊಮ್ಮೆ ಯೂರಿಯಾ ಕೊಟ್ಟರಾಯಿತು ಎಂದು ಖರೀದಿಗೆ ಹೋದರೆ ಸಿಗ್ತುತಿಲ್ಲ. ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಗೊಬ್ಬರ ಬಂದಿರುವ ಸುದ್ದಿ ತಿಳಿದ ನೂರಾರು ರೈತರು ಗುರುವಾರ ಏಕಕಾಲಕ್ಕೆ ಜಮಾಯಿಸಿದ್ದರು. ಇದರಿಂದ ನೂಕುನುಗ್ಗಲು ಉಂಟಾಯಿತು.
ರೈತರು ಪರಸ್ಪರ ವಾಗ್ವಾದಕ್ಕಿಳಿದ ಘಟನೆಗಳು ನಡೆದವು. ವಿಷಯ ತಿಳಿದ ಪೊಲೀಸರು ಆಗಮಿಸಿ ರೈತರನ್ನು ಸಾಲಿನಲ್ಲಿ ನಿಲ್ಲಿಸಿದರು. 500 ಚೀಲ ಯೂರಿಯಾ ಬಂದಿದ್ದರಿಂದ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ 1 ಆಧಾರ್ ಕಾರ್ಡ್ಗೆ 1 ಚೀಲ ಯೂರಿಯಾ ಕೊಡಬೇಕು ಎಂದು ಕೃಷಿ ಇಲಾಖೆ ಮತ್ತು ಪೊಲೀಸರು ಸೂಚಿಸಿದರು. ರೈತರು ತಮ್ಮ ಮಕ್ಕಳು ಸೇರಿ ಕುಟುಂಬದ ಸದ್ಯಸರೊಡಗೂಡಿ ಆಧಾರ ಕಾರ್ಡ್ ಹಿಡಿದು ಸರದಿ ಸಾಲಿನಲ್ಲಿ ನಿಂತು ಯೂರಿಯಾ ಗೊಬ್ಬರ ತೆಗೆದುಕೊಂಡು ಹೋದರು. ಸರದಿಯಲ್ಲಿ ನಿಂತಿದ್ದ ಅರ್ಧಕ್ಕಿಂತ ಹೆಚ್ಚು ರೈತರು ಬರಿಗೈಲಿ ವಾಪಸ್ ಹೋಗುವಂತಾಯಿತು.
ಉತ್ತಮ ಮಳೆ ಸುರಿದಿದ್ದರಿಂದ ಮೆಕ್ಕೆಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಸೇರಿ ಹಲವು ಬೆಳೆಗಳಿಗೆ ಯೂರಿಯಾ ಗೊಬ್ಬರದ ಅವಶ್ಯಕತೆ ಹೆಚ್ಚಿದೆ. ಈ ವರ್ಷ ತಾಲೂಕಿನಲ್ಲಿ 16 ಸಾವಿರ ಹೆಕ್ಟೇರ್ನಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದರಿಂದ ಯೂರಿಯಾಕ್ಕೆ ಬೇಡಿಕೆ ಹೆಚ್ಚಿದೆ. ಕುಂದಗೋಳ, ಶಿರಹಟ್ಟಿ, ಶಿಗ್ಗಾಂವಿ ಹಾಗೂ ಸವಣೂರ ತಾಲೂಕಿನ ರೈತರೂ ಲಕ್ಷೆ್ಮೕಶ್ವರಕ್ಕೆ ಬಂದು ಗೊಬ್ಬರ ಒಯ್ಯುತ್ತಿದ್ದಾರೆ. ಒಂದು ತಿಂಗಳಿಂದ ಯೂರಿಯಾಕ್ಕಾಗಿ ಅಲೆಯುತ್ತಿದ್ದರೂ ಸಿಗುತ್ತಿಲ್ಲ. ಯಾವಾಗ ಬರುತ್ತದೆ ಎಂಬ ಮಾಹಿತಿಯೂ ಸಿಗುತ್ತಿಲ್ಲ. ಒಬ್ಬರಿಗೆ 1 ಚೀಲ ಕೊಡುತ್ತಾರೆ ಎಂಬ ಸುದ್ದಿ ತಿಳಿದು ಇವತ್ತು ಮಕ್ಕಳನ್ನು ಶಾಲೆ ಬಿಡಿಸಿ ಕರೆ ತಂದು ಸರದಿ ಸಾಲಿನಲ್ಲಿ ನಿಲ್ಲಿಸಿದ್ದೇವೆ ಎಂಬ ಮಾತುಗಳು ರೈತರಿಂದ ಕೇಳಿ ಬಂದವು.
ಗದಗ ಜಿಲ್ಲೆಗೆ ಗೊಬ್ಬರ ಪೂರೈಕೆಯಲ್ಲಿ ಪ್ರತಿ ಬಾರಿ ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಅವಶ್ಯವಿರುವಷ್ಟು ಗೊಬ್ಬರ ಕಂಪನಿಯವರು ಪೂರೈಕೆ ಮಾಡುತ್ತಿಲ್ಲ. ಗೊಬ್ಬರ ಕಂಪನಿಗಳು ರೈತರ ಈ ಬೇಡಿಕೆಯನ್ನು ಬಂಡವಾಳ ಮಾಡಿಕೊಂಡು ವ್ಯಾಪಾರಸ್ಥರಿಗೆ ಯೂರಿಯಾ ಜತೆಗೆ ಇತರ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸುವಂತೆ ಕಟ್ಟಳೆ ಹಾಕುತ್ತಿದ್ದಾರೆ. ಇದರಿಂದ ಅಂಗಡಿಯವರು ಯೂರಿಯಾ ಮಾರಾಟ ಮಾಡಲೂ ಹಿಂಜರಿಯುತ್ತಿದ್ದಾರೆ. ಏತನ್ಮಧ್ಯೆ ಯೂರಿಯಾ ಅವಶ್ಯಕತೆ ಇಲ್ಲದ ಕೆಲವರು ಪ್ರತಿ ಬಾರಿ ಯೂರಿಯಾ ಬಂದಾಗ ಸರದಿಯಲ್ಲಿ ನಿಂತು ಯೂರಿಯಾ ಸಂಗ್ರಹಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.