

ಚಿಕ್ಕಬಳ್ಳಾಪುರ: ವಿವಿಧೆಡೆ ಊರ ದೇವತೆಗಳನ್ನು ಪೂಜಿಸುವ ಜಾತ್ರಾ ಮಹೋತ್ಸವಗಳಿಗೆ ಅದ್ಧೂರಿ ಚಾಲನೆ ನೀಡಲಾಯಿತು. ವರುಣರಾಯನ ಕೃಪೆ ಮತ್ತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.
ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಕೊರಚರಪೇಟೆ ಪ್ರದೇಶದ ಸಮಿತಿಯು ಅಣ್ಣಮ್ಮ ದೇವಿ ಜತೆಗೆ ಗ್ರಾಮ ದೇವತೆಗಳು, ಬಲಮುರಿ ವೃತ್ತದಲ್ಲಿ ಸರ್ಕಲ್ ಮಾರಮ್ಮ ಬಳಗ ಮತ್ತು ಆರ್.ವಿ.ಕಾಂಪ್ಲೆಕ್ಸ್ ಮುಂಭಾಗ ಸರ್ ಎಂ.ವಿ.ಗೆಳೆಯರ ಸಮಿತಿ ನೇತೃತ್ವದಲ್ಲಿ ಗ್ರಾಮ ದೇವತೆಗೆಳನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು. ಆಯಾ ವ್ಯಾಪ್ತಿಯಲ್ಲಿ ಮಹಿಳೆಯರು ತಂಬಿಟ್ಟು ದೀಪಗಳನ್ನು ತಲೆಯ ಮೇಲೆ ಹೊತ್ತು ಸಾಗಿದರು. ದೇವಾಲಯಗಳಲ್ಲಿ ದೇವರಿಗೆ ಆರತಿಯನ್ನು ಬೆಳಗಿಸಿ, ಹರಕೆಯನ್ನು ತೀರಿಸಿದರು.
ಆಷಾಡ ಮಾಸದಲ್ಲಿ ಊರಿನ ಕೇಡು ನಿವಾರಣೆಗಾಗಿ, ಮಳೆ, ಬೆಳೆ ಸಮೃದ್ಧಿಗಾಗಿ ಪ್ರತಿ ವರ್ಷ ಗ್ರಾಮ ದೇವತೆಗಳ ಜಾತ್ರೆ, ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ಸೇರಿದಂತೆ ಧಾರ್ಮಿಕ ಉತ್ಸವ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತ ಬರಲಾಗಿದೆ. ತಂಬಿಟ್ಟು ದೀಪಗಳನ್ನು ತಲೆ ಹೊತ್ತು ಮೆರವಣಿಗೆ ನಡೆಸುವಿಕೆ, ಗ್ರಾಮದೇವತೆಗಳಿಗೆ ವಿಶೇಷ ಪೂಜೆ, ಹೋಮ ಮತ್ತು ಬಲಿಪೂಜೆ, ಮನೆ ಮನೆಗೂ ದೇವರ ಮೂರ್ತಿಗಳ ಸಂಚಾರ ಸೇರಿದಂತೆ ವಿವಿಧ ಚಟುವಟಿಕೆ ನಡೆಯಲಿದ್ದು ಮೊದಲ ದಿನವಾದ ಸೋಮವಾರ ಶಾಂತಿ ಸ್ವರೂಪದ ದೇವರನ್ನು ಪೂಜಿಸಲಾಯಿತು. ಇನ್ನು ದೇವರಿಗೆ ಕೋಳಿ, ಕುರಿ, ಮೇಕೆ ಬಲಿ ಮತ್ತು ಗ್ರಾಮ ದೇವತೆಗೆಳ ಊರು ಸಂಚಾರ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
*ನಿರಂತರ ಸಂಭ್ರಮ ಉತ್ಸವಗಳು
ನಂದಿಯ ನಂದೀಶ್ವರ, ರಂಗಸ್ಥಳದ ರಂಗನಾಥ ಸ್ವಾಮಿ, ಕೈವಾರದ ಯೋಗಿ ನಾರೇಯಣ, ವಿದುರಾಶ್ವತ್ಥದ ವಿದುರ ನಾರಾಯಣ ಸ್ವಾಮಿ ಸೇರಿ ವಿವಿಧ ದೇವಾಲಯಗಳನ್ನು ಹೊಂದಿರುವ ಜಿಲ್ಲೆಯು, ಮೊದಲಿನಿಂದಲೂ ಧಾರ್ಮಿಕ ಅದ್ಧೂರಿ ಕಾರ್ಯಕ್ರಮಗಳಿಗೆ ಹೆಸರುವಾಸಿ. ಈಗಾಗಲೇ ಜಿಲ್ಲೆಯ ವಿವಿಧೆಡೆ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವಗಳ ಅದ್ಧೂರಿಯಾಗಿ ನಡೆದಿವೆ. ಕರ್ನಾಟಕದ ಕಾಶಿ ಚಿಂತಾಮಣಿಯ ಕೈವಾರ ಯೋಗಿ ನಾರೇಯಣ ಮಠದಲ್ಲಿ ಜು.1 ರಿಂದ ಮೂರು ದಿನಗಳ ಸಂಗೀತೋತ್ಸವ ಮತ್ತು ಗುರು ಪೂರ್ಣಿಮಾ ಉತ್ಸವ ಕೈಗೊಳ್ಳಲಾಗಿದೆ. ಹಾಗೆಯೇ ನಂದಿ ಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಆಷಾಡ ಮಾಸದ ಕಡೆ ಸೋಮವಾರ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ನಡೆದಿದೆ. ಮತ್ತೊಂದೆಡೆ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರಾಮದೇವತೆಗಳ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಂಭ್ರಮಿಸಲಾಗುತ್ತಿದೆ.