ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

Oplus_16908288
ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ನಡೆಯುತ್ತಿರುವ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಎತ್ತಿನ ಗಾಡಿ ಓಡಿಸುವ ಮೂಲಕ ದರ್ಶನ್ ಧ್ರುವನಾರಾಯಣ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಗಮನ ಸೆಳೆದರು.
Published on

ನಂಜನಗೂಡು: ರೈತರ ಶ್ರಮ, ಪಶುಪ್ರೇಮ ಮತ್ತು ಕ್ರೀಡಾ ಮನೋಭಾವವನ್ನು ಒಂದೇ ವೇದಿಕೆಯಲ್ಲಿ ತೋರಿಸುವಂತಹ ಎತ್ತಿನ ಗಾಡಿ ಓಟದ ಸ್ಪರ್ಧೆಗಳು ಹಳ್ಳಿ ಸಂಸ್ಕೃತಿಯ ಅಸ್ತಿತ್ವವನ್ನು ಮುಂದುವರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಪರಂಪರೆಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ದರ್ಶನ್ ಧ್ರುವ ನಾರಾಯಣ ತಿಳಿಸಿದರು.

ತಾಲೂಕಿನ ಹೆಡತಲೆ ಗ್ರಾಮದಲ್ಲಿ ಶನಿವಾರ ಹೆಡತಲೆ ಹಳ್ಳಿಕಾರ್ ಅಭಿಮಾನಿ ಬಳಗದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಮೂರನೇ ವರ್ಷದ 2 ದಿನಗಳ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಹೆಡತಲೆ ಗ್ರಾಮದಲ್ಲಿ ಮೂರು ವರ್ಷಗಳಿಂದ ಇಂತಹ ಗ್ರಾಮೀಣ ಕ್ರೀಡೆಗಳನ್ನು ಆಯೋಜನೆ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ. ಇಂತಹ ಕ್ರೀಡೆಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ರೈತ ಕ್ರೀಡೆಗಳು ನಡೆಯುತ್ತವೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕ್ರೀಡೆಗಳನ್ನು ಆಯೋಜನೆ ಮಾಡಲು ಸಹಕಾರ ನೀಡುತ್ತೇನೆ ಎಂದರು.

ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಇಂತಹ ಗ್ರಾಮೀಣ ಕ್ರೀಡೆಗಳು ನಡೆಯುವುದು ಕಡಿಮೆಯಾಗಿದೆ. ಈ ಮಧ್ಯೆ ನಂಜನಗೂಡು ತಾಲೂಕಿನಲ್ಲಿ ಹೆಚ್ಚಾಗಿ ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂದಿನ ಪೀಳಿಗೆ ಯುವಕರು ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಇತರಆಟಗಳನ್ನು ಆಡುತ್ತಿದ್ದಾರೆ. ಹಿಂದಿನ ದಿನ ಕಾಲದಲ್ಲಿ ನಡೆಯುತ್ತಿದ್ದ ಆಟೋಟಗಳನ್ನು ಮರೆತಿದ್ದಾರೆ. ಗ್ರಾಮದ ಯುವಕರು ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ಮಂಡ್ಯ, ಮೈಸೂರು, ಚಾಮರಾಜನಗರ, ನಂaಜನಗೂಡು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 30 ಜೋಡಿ ಎತ್ತಿನ ಗಾಡಿಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜ್, ಬಿಜೆಪಿ ಜಿಲ್ಲಾ ಗ್ರಾಮಂತರ ಅಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ದೊರೆಸ್ವಾಮಿ ನಾಯಕ, ತಾಲೂಕು ನಾಯಕರ ಸಂಘದ ಅಧ್ಯಕ್ಷ ನಾಗರಾಜ್, ಸೋಮೇಶ್, ದೇಬೂರು ಅಶೋಕ್, ಅನಿಲ್, ರಂಗಪ್ಪ,ರಘು, ಶಿವು, ಆನಂದ್ ಸೇರಿದಂತೆ ಗ್ರಾಮಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net