ಗಮನ ಸೆಳೆದ ಗ್ರಾಮೀಣ ಕ್ರೀಡೋತ್ಸವ

gramina kridakuta
Published on

ಮಡಿಕೇರಿ: ಗ್ರಾಮೀಣ ಕ್ರೀಡಾ ಸಂಸ್ಕೃತಿಯ ಪುನರುಜ್ಜೀವನಕ್ಕಾಗಿ ೬೯ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಒಕ್ಕೂಟದ ವತಿಯಿಂದ ವೀರನಾಡು ರಕ್ಷಣಾವೇದಿಕೆಯ ಸಹಯೋಗದಲ್ಲಿ ಸಂಭ್ರಮದ ಗ್ರಾಮೀಣ ಕ್ರೀಡೋತ್ಸವ ನಡೆಯಿತು.

ನಗರದ ಗಾಂಧಿ ಮೈದಾನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೋಲಿ, ಬುಗುರಿ, ಲಗೋರಿ, ಚಕ್ರಗಾಡಿ ತಳ್ಳುವುದು, ಕ್ಯಾಟರ್ ಬಿಲ್ಲಿನಿಂದ ಕಲ್ಲು ಹೊಡೆಯುವುದು, ಕುಂಟೆ ಬಿಲ್ಲೆ, ಚಿಣ್ಣಿದಾಂಡ್, ಮಡಿಕೆ ಒಡೆಯುವು ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಕಪ್ಪೆ ಓಟ, ಕಾಳು ಹೆಕ್ಕುವುದು ಮೊದಲಾದ ಗ್ರಾಮೀಣ ಆಟಗಳಲ್ಲಿ ಮಕ್ಕಳು, ವಯೋವೃದ್ಧರು, ಯುವಕ, ಯುವತಿಯರು ಪಾಲ್ಗೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ, ಮರೆತು ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬುವ ನಿಟ್ಟಿನಲ್ಲಿ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ಇಂದಿನ ಯುವ ಸಮೂಹ ಮೊಬೈಲ್ ಪ್ರಭಾವಕ್ಕೆ ಸಿಲುಕಿ ಕ್ರೀಡಾ ಚಟುವಟಿಕೆಗಳಿಂದ ದೂರ ಸರಿದಿರುವುದಲ್ಲದೆ, ಅವರಿಗೆ ಗ್ರಾಮೀಣ ಆಟೋಟಗಳ ಬಗ್ಗೆ ಮಾಹಿತಿಗಳಿಲ್ಲ. ಗ್ರಾಮೀಣ ಕ್ರೀಡೋತ್ಸವದ ಮೂಲಕ ನಮ್ಮ ಹಳೆಯ ಕ್ರೀಡೆಗಳನ್ನು ಅವರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಉದ್ಯಮಿ ಕೆ.ಆರ್.ರವಿ ತೆಂಗಿನ ಕಾಯಿಗೆ ಕಲ್ಲುಹೊಡೆಯುವ ಮುಖಾಂತ ಕ್ರೀಡಾಕೂಟ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಗೌರವ ಅಧ್ಯಕ್ಷ ದಾಮೋದರ್, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರದೀಪ್ ಕರ್ಕೆರ, ಡಿವೈಎಸ್‌ಪಿ ಮಹೇಶ್, ಪ್ರಮುಖರಾದ ಪಿ.ಪಿ.ಚಾಮಿ ಹಾಜರಿದ್ದರು. ಒಕ್ಕೂಟದ ಪ್ರಮುಖರಾದ ಕೆ.ಆರ್.ದಿನೇಶ್ ಶೆಟ್ಟಿ, ಪ್ರದೀಪ್ ಕರ್ಕೆರ, ಲಕ್ಷ್ಮಣ್ ಹೊದ್ದೂರು, ಹರಿಣಾಕ್ಷಿ, ಶಭರಿ ಗ್ರಾಮೀಣ ಕ್ರೀಡಾಕೂಟದ ಮೇಲ್ವಿಚಾರಣೆ ವಹಿಸಿದ್ದರು.

ಹಸಿರ ಚಪ್ಪರದಲ್ಲಿ ಸಾಂಸ್ಕೃತಿಕ ಸಿರಿ: ಕ್ರೀಡೋತ್ಸವದ ನಂತರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಸಿರ ಚಪರದ ಮಾದರಿಯ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಕರ್ಷಿಸಿತು. ಇದೇ ಸಂದರ್ಭ ಹಿರಿಯ ಪೌರಕಾರ್ಮಿಕರು, ಶ್ರಮಿಕ ಬಂಧುಗಳು, ಸವಿತಾ ಸಮಾಜದವರು, ಕೃಷಿಕರು, ಮಾಜಿ ಸೈನಿಕರು, ಹಿರಿಯ ಆಟೋ, ಟ್ಯಾಕ್ಸಿ ಚಾಲಕರು, ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net