

ಸಿದ್ದಾಪುರ: ನೆಲ್ಯಹುದಿಕೇರಿ ಕುಂಬಾರಗುಂಡಿಯ ಹೊಳೆಕೆರೆ ಪೈಸಾರಿ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಗ್ರಾಮೀಣ ಕ್ರೀಡಾ ಹಬ್ಬ ವಿವಿಧ ಕಾರ್ಯಕ್ರಮಗಳೊಂದಿಗೆ ಸಡಗರದಿಂದ ಬುಧವಾರ ನಡೆಯಿತು.
ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಬು ವರ್ಗಿಸ್ ಕ್ರೀಡಾಕೂಟಕ್ಕೆ ನೀಡಿ ಮಾತನಾಡಿ, ‘ಅ’ ಎಂಬ ಮೊದಲ ಅಕ್ಷರ ಕಲಿಯಲು ಗ್ರಾಮೀಣ ಭಾಗದಲ್ಲಿ ತೆರೆದ ಅಂಗನವಾಡಿ ಕೇಂದ್ರದಲ್ಲಿ ಕಲಿತ ಪುಟಾಣಿ ಮಕ್ಕಳು ಇಂದು ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಅಕ್ಷರ ಕಲಿತ ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ಜನರೆಲ್ಲ ಒಂದಾಗಿ ಸೇರಿ ಅದ್ದೂರಿಯಾಗಿ ಪ್ರತಿ ವರ್ಷ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ.
ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಕುಂಬಾರಗುಂಡಿ ಗ್ರಾಮದ ನಿವಾಸಿಗಳು ವಾರ್ಷಿಕೋತ್ಸವ ಕ್ರೀಡಾ ಸಂಭ್ರಮದಲ್ಲಿ ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತಿದ್ದಾರೆ.
ಹದಿನೈದು ವರ್ಷಗಳ ಹಿಂದೆ ರಾಂಬೋ ಸಂಘದ ಕಟ್ಟಡದಲ್ಲಿ ನಡೆಯುತ್ತಿದ್ದ ಅಂಗನವಾಡಿ ನಂತರದಲ್ಲಿ ಸ್ವಂತ ಕಟ್ಟಡ ಕಟ್ಟಲಾಗಿದ್ದರೂ ನದಿ ನೀರಿನ ಪ್ರವಾಹ ಸಂದರ್ಭ ಕುಸಿದಿದೆ.
ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಅಚ್ಚುಕಟ್ಟಾದ ವ್ಯವಸ್ಥೆ ಯೊಂದಿಗೆ ಅಂಗನವಾಡಿ ಮುನ್ನಡೆಯುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಲು ಪ್ರೋತ್ಸಾಹ ನೀಡಬೇಕೆಂದರು.
ಜಾತಿ, ಮತ, ಭೇದವಿಲ್ಲದೆ ಗ್ರಾಮದ ಎಲ್ಲರೂ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಷಯ ಎಂದರು.
ಮಳೆಯ ಸಿಂಚನದ ನಡುವೆಯೂ ಮಹಿಳೆಯರು ಪುರುಷರ ಹಗ್ಗ ಜಗ್ಗಾಟ ಗಮನ ಸೆಳೆಯಿತು. ಇದರೊಂದಿಗೆ ಮೈಂಡ್ ಗೇಮ್, ಪಾಸ್ ಇಂದ ಕ್ಯಾಪ್, ಮ್ಯೂಸಿಕಲ್ ಚೇರ್, ಕಾಲಿಗೆ ಬಲೂನ್ ಕಟ್ಟಿ ಒಡೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಬಲೂನ್ ಒಡೆಯುವ ಸ್ಪರ್ಧೆ, ರಿಂಗ್ ಜಂಪಿಂಗ್, ಲೆಮನ್ ಆ್ಯಂಡ್ ಸ್ಪೂನ್, ವಾಟರ್ ಬಾಲ್, ರಿಂಗ್‌ನಲ್ಲಿ ಬಾಲ್ ಎತ್ತುವ ಸ್ಪರ್ಧೆ, ಅದೃಷ್ಟದ ಬಾಲ್, ಮೊಟ್ಟೆ ತಿನ್ನುವ ಸ್ಪರ್ಧೆ, ಕಣ್ಣು ಕಟ್ಟಿ ಬಕೆಟ್‌ಗೆ ನೀರು ಹಾಕುವ ಸ್ಪರ್ಧೆ, ಛದ್ಮವೇಶ, ನಿಧಾನದ ನಡಿಗೆ ಸೇರಿದಂತೆ ಹಲವು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಭಾಗವಹಿಸಿ ಸಂಭ್ರಮಿಸಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಧನಲಕ್ಷ್ಮೀ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮದ ಪ್ರಮುಖರನ್ನು ಗೌರವಿಸಲಾಯಿತು.
ಗಮನಸೆಳೆದ ಮ್ಯಾಜಿಕ್ ಶೋ: ರಾಜ್ಯ ಪ್ರಶಸ್ತಿ ವಿಜೇತ ಮ್ಯಾಜಿಕ್ ಮಾಂತ್ರಿಕ ಎಂದೆ ಹೆಸರುವಾಸಿಯಾಗಿರುವ ಅಮ್ಮತಿಯ ರಾಜೇಶ್ ನಡೆಸಿದ ಮ್ಯಾಜಿಕ್ ಶೋ ನೆರೆದಿದ್ದವರ ಗಮನಸೆಳೆಯಿತು. ಮಕ್ಕಳು ನಡೆಸಿಕೊಟ್ಟ ವಿವಿಧ ಸಾಂಸಕ್ಕತಿಕ ಕಾರ್ಯಕ್ರಮಗಳು ಪಾಲಕರ ಮನಸೂರೆಗೊಳಿಸಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡು, ಗೆಲುವು ಸಾಧಿಸಿದವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯ ಮುಸ್ತಫ, ವಿವಿಧ ಸಮಿತಿಗಳ ಪ್ರಮುಖರಾದ ಸತ್ಯ, ಸುನೀರ್, ಶಾಲಿನಿ, ರಾಧಾ, ಆರತಿ, ಸತ್ಯವತಿ, ಪ್ರೇಮಾ, ವಿನಿತಾ, ಆಫೀಫಾ ಇತರರು ಇದ್ದರು.