

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮನೆ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ (ಜೆಜೆಎಂ)ನಡಿ ಕೈಗೆತ್ತಿಕೊಂಡಿರುವ ಕಾಮಗಾರಿಯಿಂದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ರಸ್ತೆ ಹಾಳಾಗಿರುವುದರಿಂದ ಕೆಲವೆಡೆ ಬಸ್ ಸಂಚಾರ ಸ್ಥಗಿತಗೊಂಡಿದೆ. ತಕ್ಷಣ ಗ್ರಾಮೀಣ ಭಾಗದ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ನವಲಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು) ನಾಮನಿರ್ದೇಶಿತ ಸದಸ್ಯರು ಆಗ್ರಹಿಸಿದರು.
ಇಲ್ಲಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಸೋಮವಾರ ನವಲಗುಂದ ವಿಧಾನಸಭೆ ಕ್ಷೇತ್ರದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳ ನಾಮನಿರ್ದೇಶಿತ ಸದಸ್ಯರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಜೆಜೆಎಂ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಜೆಜೆಎಂ ನವರು ಊರು ಹಾಳು ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಳೆದ 3-4 ವರ್ಷಗಳಿಂದ ಜೆಜೆಎಂ ಕಾಮಗಾರಿ ನಡೆಯುತ್ತಿದೆ. ಕುಸುಗಲ್ಲ, ಬ್ಯಾಹಟ್ಟಿಯಲ್ಲಿ ಪೈಪ್ಲೈನ್ ಅಳವಡಿಕೆಗೆ ಅಗೆಯಲಾದ ರಸ್ತೆಯನ್ನು ಸರಿಪಡಿಸಿಲ್ಲ. ಇದರಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ. ರಸ್ತೆ ದುರಸ್ತಿಗೆ ಎಷ್ಟು ದಿನಗಳು ಬೇಕಾಗಬಹುದು? ಎಂದು ಪ್ರಶ್ನಿಸಿದರು.
ಜೆಜೆಎಂ ಯೋಜನೆಯ ಕುರಿತೇ ಪ್ರತ್ಯೇಕ ಸಭೆ ನಡೆಸಿ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತ್ವರಿತವಾಗಿ ರಸ್ತೆ ದುರಸ್ತಿ ಕುರಿತು ಸ್ಪಷ್ಟವಾದ ಸೂಚನೆ ನೀಡಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ಕೋರಿದರು. ಮೋರಂ, ಮಣ್ಣು ಹಾಕಿ ಸದ್ಯ ವಾಹನಗಳು ಚಲಿಸುವಷ್ಟರ ಮಟ್ಟಿಗಾದರೂ ರಸ್ತೆ ದುರಸ್ತಿ ಮಾಡಿ. ಮುಂದಿನ ದಿನಗಳಲ್ಲಿ ಡಾಂಬರ್, ಕಾಂಕ್ರೀಟ್ ಹಾಕಿ ಪೂರ್ಣ ಪ್ರಮಾಣದಲ್ಲಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಕೋನರಡ್ಡಿ ಹೇಳಿದರು.
ಸ್ವಚ್ಛತೆ ಹೊಣೆ ಪಿಡಿಒಗಳದ್ದು
ಗ್ರಾಮೀಣ ಭಾಗದಲ್ಲಿ ಎಲ್ಲೆಡೆ ತಿಪ್ಪೆಗುಂಡಿಗಳು ನಿರ್ವಣಗೊಂಡಿವೆ. ಇತ್ತೀಚೆಗೆ ನಾಗನೂರ, ಇತ್ಯಾದಿ ಕಡೆ ಸಂಚರಿಸುವಾಗ ನಾನೇ ಜೆಸಿಬಿ ತರಿಸಿ ಕಸದ ರಾಶಿಯನ್ನು ತೆರವುಗೊಳಿಸಿದ್ದೇನೆ. ಸ್ವಚ್ಛತೆ ಇಲ್ಲದೆಡೆ ಡೆಂಘ, ಚಿಕೂನ್ ಗುನ್ಯಾದಂಥ ರೋಗಗಳು ಕಾಣಿಸಿಕೊಳ್ಳುತ್ತವೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯ ಹೊಣೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳದ್ದು. ಪಿಡಿಒಗಳಿಂದ ಕೆಲಸ ಮಾಡಿಸುವ ಜವಾಬ್ದಾರಿಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಧಾರವಾಡ ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ನವಲಗುಂದ ತಹಶೀಲ್ದಾರ ಸುಧೀರ ಸಾಹುಕಾರ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ಅಣ್ಣಿಗೇರಿ ತಹಶೀಲ್ದಾರ ಎಂ.ಜಿ.ದಾಸಪ್ಪನವರ, ನವಲಗುಂದ ತಾಪಂ ಇಒ ಭಾಗ್ಯಶ್ರೀ ಜಹಗೀರದಾರ್, ಅಣ್ಣಿಗೇರಿ ಇಒ ಮದನಕುಮಾರ ಸಿಂಧೆ, ಆಡಳಿತಾಧಿಕಾರಿ ಲಲಿತಾ ಲಮಾಣಿ, ಇತರರು ಇದ್ದರು. ಫಾತಿಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಹುಬ್ಬಳ್ಳಿ ತಾಪಂ ಇಒ ಉಮೇಶ ಬೊಮ್ಮಕನವರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕರಾದ ಮೃತ್ಯುಂಜಯ ಜಡಿಮಠ ನಿರೂಪಿಸಿದರು.