

ಕಾಂಕ್ರೀಟ್ ರಸ್ತೆ ಸೇವೆಗೆ ಅರ್ಪಣೆ
ವಿರಾಜಪೇಟೆ : ಮಿತಿ ಮೀರಿದ ವರ್ಷಧಾರೆಯಿಂದ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳು ಸಾಕಷ್ಟು ಹಾನಿಗೊಂಡಿದ್ದು, ಮಳೆ ನಿಂತ ನಂತರದಲ್ಲಿ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ತಾಲೂಕಿನ ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದ ಒಟ್ಟು 6 ಕಾಂಕ್ರೀಟ್ ರಸ್ತೆಗಳನ್ನು ಶುಕ್ರವಾರ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.
ನಿಧಿ ಬಿಡುಗಡೆ: ಮುಖ್ಯಮಂತ್ರಿಗಳ ಕ್ಷೇತ್ರ ನಿಧಿ ಯೋಜನೆ ಅಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಗಾಗಿ 17 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ. ಕಾರ್ಮಾಡು ಗ್ರಾಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಸೇವೆಗೆ ಅರ್ಪಣೆಯಾಗಿದೆ. ಗ್ರಾಮೀಣ ಭಾಗದ ಇನ್ನಷ್ಟು ರಸ್ತೆ ಅಭಿವೃದ್ಧಿಗೆ ಮಳೆ ಮುಗಿದ ನಂತರ ಕ್ರಮ ವಹಿಸಲಾಗುವುದು. ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಮಾಡು ಗ್ರಾಪಂ ಸದಸ್ಯೆ ಕೆ.ಎನ್.ಹಂಸಾ ಮಾತನಾಡಿ, ಹಲವು ವರ್ಷಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿದ್ದವು. ಈ ಬಗ್ಗೆ ಶಾಸಕರಲ್ಲಿ ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಶೀಘ್ರ ಸ್ಪಂದನೆ ದೊರಕಿ, ಇಂದು ಸಾರ್ವಜನಿಕ ಸೇವೆಗೆ ಲಭ್ಯವಾಗಿರುವುದು ಶ್ಲಾಘನೀಯ ಎಂದರು.
ಬಿಳುಗುಂದ ಗ್ರಾಪಂ ಸದಸ್ಯರಾದ ಐನಂಡ ರಂಜಿ, ಮುಖಂಡರಾದ ರಾಜೇಶ್, ಶಬರೀಶ, ಜೋಕಿಂ ರೋಡ್ರಿಗ್ಸ್, ಗ್ರಾಮದ ಪ್ರಮುಖರು ಹಾಜರಿದ್ದರು.